40 ವರ್ಷಗಳ ಸುದೀರ್ಘ ಕನಸನ್ನು ನಟ ಜಗ್ಗೇಶ್ ನನಸು ಮಾಡಿಕೊಂಡಿದ್ದಾರೆ. 1980ರಲ್ಲಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ನಟ ಜಗೇಶ್ ಇದೀಗ ತಮ್ಮದೆ ಹೆಸರಿನ ಸ್ಟುಡಿಯೋ ಆರಂಭಿಸಿದ್ದಾರೆ. ಸಹೋದರ ಕೋಮಲ್ ನಿರ್ಮಾಣದ ಯಲಾಕುನ್ನಿ ಸಿನಿಮಾದ ಎಲ್ಲ ಕೆಲಸ ‘ಜಗ್ಗೇಶ್ ಸ್ಟುಡಿಯೊಸ್’ ನಲ್ಲಿ ನಡೆಯುತ್ತಿದೆ. ಅಂದ ಹಾಗೆ ಈ ಸ್ಟುಡಿಯೋಗೆ ಜಗ್ಗೇಶ್ ಪತ್ನಿ ಪರಿಮಳ ನೀಡಿದ ಸಲಹೆಯಂತೆ ‘ಜಗ್ಗೇಶ್ ಸ್ಟುಡಿಯೊಸ್’ ಎಂದು ಹೆಸರು ಇಟ್ಟಿದ್ದಾರೆ. ನನ್ನ ಚಿಕ್ಕ ಮಗ ಯತಿರಾಜನ ಕನಸಿನ ಪ್ರಾಜೆಕ್ಟ್ ಈ ಸ್ಟುಡಿಯೋ’ ಎಂದು ಜಗ್ಗೇಶ್ ಹೇಳಿದ್ದಾರೆ.
‘ಗಾಂಧಿನಗರದಲ್ಲಿ ಒಂದು ಸ್ಟುಡಿಯೋದಲ್ಲಿ ಎನ್.ಎಸ್. ರಾವ್ ಅವರು ಡಬ್ಬಿಂಗ್ ಮಾಡುತ್ತಾ ಇದ್ದದ್ದು ನೋಡಿ ನಾನು ಇಂಪ್ರೆಸ್ ಆಗಿದ್ದೆ. ಆ ಸ್ಟುಡಿಯೋಗೆ ಆ ಸಮಯದಲ್ಲಿ 8.9 ಲಕ್ಷ ರೂಪಾಯಿ ಖರ್ಚು ಆಗಿತ್ತು ಎಂಬುದು ಗ್ರೇಟ್. ನನ್ನ ಸಿನಿಮಾ ಬದುಕಿನ ವರ್ಣ ರಂಜಿತ ಜರ್ನಿಗೆ ಚಾಮುಂಡೇಶ್ವರಿ ಸ್ಟುಡಿಯೋ ದೊಡ್ಡ ಪಾತ್ರ ವಹಿಸುತ್ತದೆ. ‘ಬಂಡ ನನ್ನ ಗಂಡ’ ಮೂಲಕ ನಾನು ಹೀರೋ ಆದೆ. ಆ ಸಮಯ ಶಂಕರನಾಗ್ ಅವರು ಸಂಕೇತ್ ಸ್ಟುಡಿಯೋಗೆ ಹೋದಾಗ ಆಗುತ್ತಿದ್ದ ಫೀಲ್ ಸಖತ್’ ಎಂದು ಆ ದಿನಗಳನ್ನು ಜಗ್ಗೇಶ್ ನೆನಪಿಸಿಕೊಂಡಿದ್ದಾರೆ.
‘ಶಂಕರನಾಗ್ ಹಾಗೆಯೇ ಇದ್ದದ್ದು. ಅವರೊಬ್ಬ ವಿಷನರಿ ಮ್ಯಾನ್. ಸ್ಕ್ರೀನ್ ಮೇಲೆ ನಮ್ಮ ಪಾತ್ರ ನೋಡಿ ಡಬ್ ಮಾಡ್ತಾ ಇದ್ದ ದಿನಗಳು, ನಿಧಾನವಾಗಿ ಕಮ್ಮಿ ಆಗ್ತಾ ಆಗ್ತಾ ಚಿಕ್ಕ ಚಿಕ್ಕ ಸ್ಕ್ರೀನ್ ನೋಡಿ ಡಬ್ ಮಾಡುವ ಕಾಲ ಬಂತು. ಇದರಿಂದ ನನಗೆ ಬೇಜಾರು ಆಗುತ್ತಿತ್ತು. ಬಹುತೇಕ ಸಂಗೀತ ನಿರ್ದೇಶಕರು ತಮ್ಮ ತಮ್ಮ ಮನೆಗಳಲ್ಲೇ ಸ್ಟುಡಿಯೋ ಮಾಡ್ಕೊಂಡು ಕೆಲಸಗಳನ್ನ ಮಾಡ್ತಾ ಇರುತ್ತಾರೆ. ವಿಶಾಲವಾದ ಜಾಗ ಇರುವುದು ಕಡಿಮೆ. ನನ್ನ ಕನಸು ಬೇರೆ ಇತ್ತು. ಸ್ಟುಡಿಯೋ ವಿಶಾಲವಾಗಿ ಇರಬೇಕು ಎಂಬುದು ನನ್ನ ಆಸೆಯಾಗಿತ್ತು. ಕಲಾವಿದರಿಗೆ ಸ್ವಲ್ಪ ಫೀಲ್ ಗುಡ್ ಅನುಭವ ಇದ್ದರೆ ಒಳ್ಳೆದು ಎನಿಸುತ್ತದೆ’ ಎಂದು ಜಗ್ಗೇಶ್ ಹೇಳಿದ್ದಾರೆ.
‘ಚಿತ್ರೀಕರಣ ಮುಗಿದ ನಂತರ ಫೂಟೇಜ್ ತಂದು ಇಲ್ಲಿ ಕೊಟ್ಟರೆ ಸಿಜಿ ಒಂದು ಬಿಟ್ಟು ಮಿಕ್ಕ ಎಲ್ಲಾ ಕೆಲಸಗಳನ್ನು ಇಲ್ಲಿ ಮಾಡಲಾಗುತ್ತದೆ. ಈಗಾಗಲೇ ಒಂದು ಮಲಯಾಳಂ ಹಾಗೂ ಒಂದು ಹಿಂದಿ ಸಿನಿಮಾದ ಕೆಲಸ ಇಲ್ಲಿ ಆಗಿದೆ. ಅವರೆಲ್ಲ ತುಂಬ ಖುಷಿ ಆಗಿದ್ದಾರೆ. ಚಿಕ್ಕ ಬಜೆಟ್, ದೊಡ್ಡ ಬಜೆಟ್ ಸಿನಿಮಾ ಅಂತ ಭೇದ ಮಾಡದೇ ಎಲ್ಲವೂ ಒಂದೇ ಎಂದು ಫೀಲ್ ಮಾಡಬೇಕು. ನನ್ನ ಸ್ಟುಡಿಯೋದಲ್ಲಿ ಇರುವ ಎಲ್ಲ ಸಾಧನಗಳು ಲೇಟೆಸ್ಟ್. ಎಲ್ಲವನ್ನೂ ಅಮೆರಿಕದಿಂದ ತರಿಸಿದ್ದೇವೆ’ ಎಂದು ಜಗ್ಗೇಶ್ ಅವರು ಹೇಳಿದ್ದಾರೆ.
‘ಬೇರೆ ಸ್ಟುಡಿಯೋದವರು ಕೊಡುವ ಕ್ವಾಲಿಟಿಗಿಂತ ಒಳ್ಳೆಯ ಔಟ್ ಪುಟ್ ಕೊಟ್ಟು, ಬೆಲೆ ಸಹ ಸ್ವಲ್ಪ ಕಡಿಮೆ ಇರುತ್ತದೆ. ಈಗಾಗಲೇ ನಮ್ಮಲ್ಲಿ ನಾಲ್ಕೈದು ಸಿನಿಮಾಗಳು ಇವೆ. ಅವುಗಳ ಕೆಲಸ ನಡೆಯುತ್ತಿದೆ. ನನ್ನ ಉದ್ಯಮದ ಜನಕ್ಕೆ ನನ್ನ ಸೇವೆ ತಲುಪಬೇಕು. ನನಗೆ ಹಾಡು ಹೇಳೋ ಆಸಕ್ತಿ. ರಾಘವೇಂದ್ರ ಸ್ವಾಮಿಗಳ ಹಾಡುಗಳನ್ನು, ಲಾವಣಿ ಶೈಲಿಯ, ಆಡು ಭಾಷೆಯ ಹಾಡುಗಳ ಬಗ್ಗೆ ಆಸಕ್ತಿ ಇದೆ. ರಾಯರು ನನ್ನಿಂದ ಶುರು ಮಾಡಿಸುತ್ತಾರೆ. ಅಣ್ಣಾವ್ರ ಬಾನಿಗೊಂದು ಎಲ್ಲೆ ಎಲ್ಲಿದೆ, ವೇದಾಂತಿ ಹೇಳಿದನು, ಎಂದೆಂದೂ ನಿನ್ನನು ಮರೆತು, ಹಾಡುಗಳನ್ನು ನಾನೇ ಹಾಡಿ ಸಂಭ್ರಮ ಪಟ್ಟಿದ್ದೇನೆ’ ಎಂದು ಜಗ್ಗೇಶ್ ತಿಳಿಸಿದರು.