ಫಿಲಿಪೈನ್ಸ್ ನಲ್ಲಿ ಸಂಭವಿಸುತ್ತಿರುವ ಟ್ರಾಮಿ ಚಂಡಮಾರುತ ವಿನಾಶ ಉಂಟು ಮಾಡಿದೆ. ಇದರಿಂದ ಜನ ಜೀವ ಅಸ್ತವ್ಯಸ್ಥವಾಗಿದ್ದು ಹಲವರು ಮನೆ, ಮಠ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಚಂಡಮಾರುತವು ಕನಿಷ್ಠ 26 ಜನರನ್ನ ಬಲಿ ತೆಗೆದುಕೊಂಡಿದೆ.
ಟ್ರಾಮಿ ಚಂಡಮಾರುತ್ತಕ್ಕೆ 1,50,000ಕ್ಕೂ ಹೆಚ್ಚು ಜನರು ತಮ್ಮ ಮನೆಗಳನ್ನು ತೊರೆಯುವಂತಾಗಿದೆ. ಟ್ರಾಮಿ ಚಂಡಮಾರುತವು ಧಾರಾಕಾರ ಮಳೆಗೆ ಕಾರಣವಾಗಿದ್ದು ಇದರಿಂದ ಹಲವೆಡೆ ವ್ಯಾಪಕ ಪ್ರವಾಹ ಮತ್ತು ಭೂಕುಸಿತ ಉಂಟಾಯಿತು. ಪ್ರವಾಹದಿಂದಾಗಿ ಕಾರುಗಳು ರಸ್ತೆಗಳಲ್ಲಿ ಕೊಚ್ಚಿಹೋಗಿವೆ. ಇನ್ನು ಶಾಲಾ- ಕಾಲೇಜುಗಳಿಗೆ ಸರ್ಕಾರ ರಜೆ ಘೋಷಿಸಿದೆ.
ಉಷ್ಣವಲಯದ ಚಂಡಮಾರುತ ಟ್ರಾಮಿ ಈಶಾನ್ಯ ಪ್ರಾಂತ್ಯಕ್ಕೆ ಅಪ್ಪಳಿಸಿದ ನಂತರ ಲಕ್ಷಾಂತರ ಜನರನ್ನು ಉಳಿಸಲು ರಕ್ಷಣಾ ಕಾರ್ಯಾಚರಣೆ ಎರಡನೇ ದಿನವೂ ಮುಂದುವರೆದಿದೆ. ಮನೆಗಳ ಛಾವಣಿಯಲ್ಲಿ ಸಿಲುಕಿರುವ ಜನರನ್ನು ಮೋಟಾರು ದೋಣಿಗಳ ಸಹಾಯದಿಂದ ರಕ್ಷಿಸಲಾಗುತ್ತಿದೆ. ಇಫುಗಾವೊ ಪರ್ವತ ಪ್ರಾಂತ್ಯದ ಅಗುನಾಲ್ಡೊ ನಗರದಲ್ಲಿ ಗಂಟೆಗೆ 95 ಕಿಲೋಮೀಟರ್ ವೇಗದಲ್ಲಿ ಬಲವಾದ ಗಾಳಿ ಬೀಸುತ್ತಿತ್ತು. ಪ್ರವಾಹ ಮತ್ತು ಭೂಕುಸಿತದಿಂದಾಗಿ ಬಿಕೋಲ್ ಪ್ರದೇಶವು ಕೆಟ್ಟದಾಗಿ ಪರಿಣಾಮ ಬೀರಿದೆ. ಪ್ರವಾಹದ ನೀರಿನಲ್ಲಿ ಮುಳುಗಿ ಹೆಚ್ಚಿನ ಜನರು ಮೃತಪಟ್ಟಿದ್ದಾರೆ.