ಆಲಿಯಾ ಭಟ್ ಬಾಲಿವುಡ್ ಚಿತ್ರರಂಗದ ಖ್ಯಾತ ನಟಿ. ಮದುವೆಯಾದ ಬಳಿಕವೂ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿರುವ ಆಲಿಯಾ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಇತ್ತೀಚೆಗೆ ಆಲಿಯಾ ಅಭಿಮಾನಿಗಳು, ಕೆಲ ಸಿನಿಮಾ ಪ್ರೇಮಿಗಳು ನಟಿಯ ಮುಖದಲ್ಲಿ ಆಗಿರುವ ಬದಲಾವಣೆಗಳನ್ನು ಗಮನಿಸಿದ್ದಾರೆ. ಆಲಿಯಾರ ಮುಖ ಮೊದಲಿನಂತಿಲ್ಲ. ಆಲಿಯಾರ ನಗು ಹಾಗೂ ಮಾತನಾಡುವ ಶೈಲಿಯೂ ಬದಲಾಗಿದೆ. ಆಲಿಯಾರ ಮುಖ ಬೇರೆ ಆಕಾರವನ್ನೇ ಪಡೆದುಕೊಂಡಿದೆ ಎಂದು ಗುರುತಿಸಿದ್ದರು. ಕಾಸ್ಮೆಟಿಕ್ ಸರ್ಜನ್ ಒಬ್ಬರು ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದು ಸಖತ್ ವೈರಲ್ ಆಗಿತ್ತು.
ವೈದ್ಯ ಸಾಯಿ ಗಣಪತಿ ಎಂಬುವರು ಸಂದರ್ಶನವೊಂದರಲ್ಲಿ ಮಾತನಾಡಿ, ‘ಆಲಿಯಾ ಭಟ್ರ ಇತ್ತೀಚೆಗಿನ ವಿಡಿಯೋ, ಚಿತ್ರಗಳನ್ನು ನೋಡಿದರೆ ಅವರಿಗೆ ಮುಖದ ಪಾರ್ಶ್ವವಾಯು ಆಗಿದೆ ಎನ್ನುವುದು ಖಾತ್ರಿಯಾಗುತ್ತಿದೆ. ಅವರು ಬಾಯಿ ಸೊಟ್ಟ ಮಾಡಿ ನಗುತ್ತಿದ್ದಾರೆ, ಬಾಯಿ ಸೊಟ್ಟ ಮಾಡಿ ಮಾತನಾಡುತ್ತಿದ್ದಾರೆ. ಅವರ ಮುಖದ ಒಂದು ಭಾಗ ಮಾತ್ರ ಸಕ್ರಿಯವಾಗಿದೆ. ಒಂದು ಭಾಗ ಸತ್ವ ಕಳೆದುಕೊಂಡಿದೆ. ಅವರು ಬೋಟಾಕ್ಸ್ (ಸೌಂದರ್ಯ ಹೆಚ್ಚು ಮಾಡುವ ಶಸ್ತ್ರಚಿಕಿತ್ಸೆ)ಗೆ ಒಳಗಾಗಿದ್ದಾರೆ ಎನಿಸುತ್ತಿದೆ. ಆದರೆ ಅದು ಯಶಸ್ವಿಯಾಗಿಲ್ಲ ಎಂದು ಸ್ಪಷ್ಟವಾಗಿ ಹೇಳಬಹುದು. ಇದು ಎಂಥಹವರಿಗೂ ಆಗಬಹುದು, ನನ್ನ ಕೆಲ ರೋಗಿಗಳಿಗೂ ಹೀಗೆ ಆಗಿತ್ತು, ಅದನ್ನು ಸೂಕ್ತ ಚಿಕಿತ್ಸೆ ಮೂಲಕ ಸರಿಪಡಿಸಬಹುದು’ ಎಂದಿದ್ದರು.
ವೈದ್ಯ ಸಾಯಿ ಗಣಪತಿಯ ಈ ವಿಡಿಯೋ ಭಾರಿ ವೈರಲ್ ಆಗಿತ್ತು. ವಿಡಿಯೋ ವೈರಲ್ ಆದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಆಲಿಯಾರ ಹಳೆಯ ಫೋಟೊ ಮತ್ತು ಈಗಿನ ಫೋಟೊ ವಿಡಿಯೋಗಳನ್ನು ಹೋಲಿಸಿ ನೋಡಿ ಆಲಿಯಾಗೆ ಪಾರ್ಶ್ವವಾಯು ಆಗಿದೆ. ಅವರ ಬೋಟಾಕ್ಸ್ ಶಸ್ತ್ರಚಿಕಿತ್ಸೆ ವಿಫಲವಾಗಿದೆ ಎಂದು ಹಲವರು ಸಂದೇಶಗಳನ್ನು ಹಂಚಿಕೊಂಡಿದ್ದರು. ಆದರೆ ಈಗ ನಟಿ ಆಲಿಯಾ ಭಟ್ ಸುದೀರ್ಘ ಪೋಸ್ಟ್ ಒಂದರ ಮೂಲಕ ಎಲ್ಲದಕ್ಕೂ ಉತ್ತರ ನೀಡಿದ್ದಾರೆ.
‘ಸೌಂದರ್ಯವರ್ಧಕ ಚಿಕಿತ್ಸೆ ಪಡೆಯುವವರ ಬಗ್ಗೆ ನನಗೆ ಯಾವುದೇ ದೂರು ಅಥವಾ ಬೇಸರ ಇಲ್ಲ. ನಿಮ್ಮ ದೇಹ ನಿಮ್ಮ ಇಷ್ಟ. ಆದರೆ ನನ್ನ ಬಗ್ಗೆ ಹಬ್ಬಿಸಲಾಗುತ್ತಿರುವ ಸುದ್ದಿಗಳು ನನಗೇ ನಂಬಲು ಸಾಧ್ಯವಾಗುತ್ತಿಲ್ಲ. ನನ್ನದು ಸೊಟ್ಟ ನಗೆ, ವಿಚಿತ್ರ ರೀತಿಯ ಮಾತುಗಾರಿಕೆ ಎಂದೆಲ್ಲ ಹೇಳುತ್ತಿದ್ದಾರೆ. ಒಬ್ಬ ವ್ಯಕ್ತಿಯ ಮುಖದ ಬಗ್ಗೆ ಹೀಗೆಲ್ಲ ಮಾತನಾಡಲು ಹೇಗೆ ಸಾಧ್ಯ? ಇದು ಅವಶ್ಯಕತೆ ಇಲ್ಲ ಸೂಕ್ಷ್ಮ ವಿಮರ್ಶೆ. ಈ ಸುಳ್ಳುಗಳಿಗೆ ‘ಸೈಂಟಿಫಿಕ್’ ವ್ಯಾಖ್ಯೆಗಳನ್ನು ಸಹ ನೀಡುತ್ತಿದ್ದೀರಿ. ನನಗೆ ಪಾರ್ಶ್ವವಾಯು ಆಗಿದೆಯೇ? ನೀವೇನು ತಮಾಷೆ ಮಾಡುತ್ತಿದ್ದೀರಾ? ಇಂಥಹಾ ಒಂದು ಗಂಭೀರ ಹೇಳಿಕೆಯನ್ನು ಯಾವುದೇ ಸಾಕ್ಷಿ, ವಿಚಾರಣೆ ಇಲ್ಲದೆ ನೀವು ನೀಡಿದ್ದೀರಿ’ ಎಂದು ಆಲಿಯಾ ಸಿಟ್ಟಾಗಿದ್ದಾರೆ.
‘ಇದನ್ನೆಲ್ಲ ನೀವು ಮಾಡುತ್ತಿರುವುದು ಏಕೆ? ಜನಪ್ರಿಯತೆಗೆ? ಕ್ಲಿಕ್ ಬೇಟ್ಗೆ? ಹಣ ಮಾಡಲು? ಇದರಿಂದ ಯುವ ಸಮಾಜಕ್ಕೆ ಏನು ಸಂದೇಶ ನೀಡುತ್ತಿದ್ದೀರಿ. ಮಹಿಳೆಯ ದೇಹ, ಮುಖ, ಖಾಸಗಿ ಜೀವನ, ನಮ್ಮ ‘ಉಬ್ಬು-ತಗ್ಗು’ಗಳ ಬಗ್ಗೆ ಚರ್ಚೆ ಮಾಡುವ ಹೀನ ಮನಸ್ಥಿತಿಯವರ ಬಗ್ಗೆ ನಾವು ದನಿ ಎತ್ತಲೇ ಬೇಕಿದೆ. ನಮ್ಮ ದೇಹ ವಿಮರ್ಶೆಯ, ಚರ್ಚೆಯ ವಸ್ತು ಆಗಿಬಿಟ್ಟಿದ್ದೆಯೇ? ವ್ಯಕ್ತಿಗಳ ಭಿನ್ನತೆಯನ್ನು, ವ್ಯಕ್ತಿತ್ವವನ್ನು ನಾವು ಸಂಭ್ರಮಿಸಬೇಕಿದೆ, ಅದರ ಹೊರತಾಗಿ ಹೀಗೆ ಜಡ್ಜ್ಮೆಂಟಲ್ ಆಗುವುದು ವಿಮರ್ಶೆ, ಟೀಕೆ ಮಾಡುವುದು ಹಾನಿಕಾರಕ, ಅದು ಸಾಕಾಗಿ ಹೋಗಿದೆ’ ಎಂದಿದ್ದಾರೆ ಆಲಿಯಾ.