ಬೆಂಗಳೂರು:- ಬೆಂಗಳೂರಿನಲ್ಲಿ ವಾಯುಮಾಲಿನ್ಯ ಹೆಚ್ಚುತ್ತಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಶೇ 39 ರಷ್ಟು PM 2.5 ಕಣಗಳ ಹೊರಸೂಸುವಿಕೆ ಆಗುತ್ತಿದ್ದರೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ಶೇ 48 ರಷ್ಟು ಮಾಲಿನ್ಯವಾಗುತ್ತಿದೆ.
ಕಡಿಮೆ ಮಾಲಿನ್ಯಕಾರಕ ಪರ್ಯಾಯ ಇಂಧನಗಳ ಲಭ್ಯತೆಯ ಹೊರತಾಗಿಯೂ ಮರ ಮತ್ತು ಕಲ್ಲಿದ್ದಲನ್ನು ಸುಡುವ ಮೂಲಕ ಕೈಗಾರಿಕೆಗಳು ಕೂಡ ವಾಯು ಮಾಲಿನ್ಯಕ್ಕೆ ಕಾರಣವಾಗುತ್ತಿವೆ ಎಂಬುದು ಅಧ್ಯಯನ ವರದಿಯೊಂದರಿಂದ ಬಹಿರಂಗವಾಗಿದೆ.
ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ನ ಸ್ಕೂಲ್ ಆಫ್ ನ್ಯಾಚುರಲ್ ಸೈನ್ಸಸ್ ಮತ್ತು ಇಂಜಿನಿಯರಿಂಗ್ ವಿಭಾಗದ ಪ್ರೊ. ಗುಫ್ರಾನ್ ಬೀಗ್ ನೇತೃತ್ವದಲ್ಲಿ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಧ್ಯಯನ ನಡೆಸಲಾಗಿತ್ತು. PM 2.5 ಕಣಗಳ ಹೊರಸೂಸುವಿಕೆ ಬಗ್ಗೆ ಸಂಶೋಧಕರು ಹಲವಾರು ತಿಂಗಳುಗಳ ಕಾಲ ಅಧ್ಯಯನ ನಡೆಸಿ ವರದಿ ಸಿದ್ಧಪಡಿಸಿದ್ದಾರೆ.
ಮೊದಲ ಬಾರಿಗೆ, ನಾವು ಅಲ್ಟ್ರಾ ಫೈನ್ ರೆಸಲ್ಯೂಶನ್ನ (200 ಚದರ ಮೀಟರ್ ಗ್ರಿಡ್ಗಳು) 80 ಮಾಲಿನ್ಯ ಹಾಟ್ಸ್ಪಾಟ್ಗಳನ್ನು ಗುರುತಿಸಿದ್ದೇವೆ. ಈ ಪ್ರದೇಶಗಳಲ್ಲಿ ಮಾಲಿನ್ಯದ ಪ್ರಮುಖ ಮೂಲಗಳ ಪತ್ತೆ ಮಾಡಲಾಗಿದೆ. ಸಾರಿಗೆ ವಲಯವು ಅತಿದೊಡ್ಡ ಮಾಲಿನ್ಯಕಾರಕವಾಗಿದೆ ಎಂಬುದನ್ನು ನಾವು ಕಂಡುಕೊಂಡಿದ್ದೇವೆ ಎಂದು ಬೀಗ್ ಹೇಳಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ತಿಳಿಸಿದೆ. ಅಧ್ಯಯನಕ್ಕೆ ಸಂಶೋಧಕರು ಹೈಬ್ರಿಡ್ ಮಾದರಿಯನ್ನು ಅಳವಡಿಸಿಕೊಂಡಿದ್ದರು.