ಟಾಲಿವುಡ್ ಕ್ಯೂಟ್ ನಟಿ ಸಮಂತಾ ಜೀವನದಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡಿದ್ದಾರೆ. ಆದರೂ ಯಾವುದಕ್ಕೂ ಅಂಜದ ಸಮಂತಾ ಗಟ್ಟಿಯಾಗಿ ಎಲ್ಲವನ್ನು ನಿಭಾಯಿಸಿದ್ದಾರೆ. ವಿಚ್ಛೇದನ ಅನಾರೋಗ್ಯ, ಮೋಸ, ನಿಂದನೆ, ಅಪಮಾನ ಎಲ್ಲವನ್ನು ಕಳೆದ ಮೂರು ವರ್ಷಗಳಲ್ಲಿ ಕಂಡ ಸಮಂತಾ ಎಲ್ಲವನ್ನೂ ದಿಟ್ಟವಾಗಿ ಎದುರಿಸಿ ನಿಂತು, ಹಲವಾರು ಹೆಣ್ಣುಮಕ್ಕಳಿಗೆ ಸ್ಪೂರ್ತಿಯಾಗಿದ್ದಾರೆ. ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಮಾತನಾಡಿರುವ ನಟಿ ಸಮಂತಾ, ತಾವು ಪ್ರತಿದಿನವೂ ಭಯದಲ್ಲಿಯೇ ಬದುಕುತ್ತಿರುವುದಾಗಿ ಹೇಳಿದ್ದಾರೆ.
ಶಕುಂತಲಂ ಸಿನಿಮಾದ ಆಫರ್ ಬಂದಾಗ ಮೊದಲು ನಾನು ಒಪ್ಪಿಕೊಳ್ಳಲಿಲ್ಲ. ನಟಿಸುವುದಿಲ್ಲ ಎಂದು ಹೇಳಿಬಿಟ್ಟೆ. ನನಗೆ ಬಹಳ ಭಯವಾಗಿತ್ತು, ನಾನು ಶಕುಂತಲಾ ರೀತಿಯಲ್ಲಿಲ್ಲ. ಆಕೆಯ ವೈಭವ, ಸೂಕ್ಷ್ಮತೆ, ವೈಯ್ಯಾರ ಇದ್ಯಾವುದೂ ನನಗೆ ಇಲ್ಲ ಎನಿಸಿತು. ಅಲ್ಲದೆ ಆಗ ತಾನೆ ನಾನು ದಿ ಫ್ಯಾಮಿಲಿ ಮ್ಯಾನ್ ವೆಬ್ ಸರಣಿಯಲ್ಲಿ ರಾಜಿ ಪಾತ್ರದಲ್ಲಿ ನಟಿಸಿದ್ದೆ. ಅದಕ್ಕಾಗಿ ದೇಹವನ್ನು ಸಾಕಷ್ಟು ಬದಲಾಯಿಸಿಕೊಂಡಿದ್ದೆ. ಶಕುಂತಲಾ ಪಾತ್ರಕ್ಕೆ ಬೇಕಾದ ಆಂಗಿಕ ಹಾಗೂ ವ್ಯಕ್ತಿತ್ವ ಎರಡೂ ನನಗೆ ಇರಲಿಲ್ಲ ಹಾಗಾಗಿ ನಾನು ಬೇಡ ಎಂದುಬಿಟ್ಟಿದ್ದೆ ಎಂದಿದ್ದಾರೆ ಸಮಂತಾ.
ಆದರೆ ಕಳೆದ ಮೂರು ವರ್ಷಗಳಲ್ಲಿ ನಾನು ಒಂದು ಕಲಿತಿದ್ದೇನೆ. ನನಗೆ ಯಾವ ವಿಷಯದ ಬಹಳ ಭಯವಾಗುತ್ತದೆಯೋ ಆ ಅದನ್ನು ಮಾಡಲೇ ಬೇಕು ಎಂಬುದನ್ನು ನಾನು ಕಲಿತಿದ್ದೇನೆ. ನನಗೆ ಭಯ ಆಗುವುದಿಲ್ಲ ಎಂದಲ್ಲ. ಬಹಳ ಭಯವಾಗುತ್ತದೆ ಆದರೆ ಅದನ್ನು ಎದುರಿಸುತ್ತೇನೆ, ಎದುರಿಸುವುದನ್ನು ಕಲಿತಿದ್ದೇನೆ. ಪ್ರತಿದಿನವೂ ನನಗೆ ಭಯವಾಗುತ್ತದೆ ಆದರೆ ಅದನ್ನು ಎದುರಿಸುತ್ತಲೇ ಬದುಕುತ್ತಿದ್ದೇನೆ. ಅದೇ ಕಾರಣಕ್ಕೆ ನಾನು ಕಳೆದ ಮೂರು ವರ್ಷಗಳಲ್ಲಿ ಸಾಕಷ್ಟು ಬದಲಾಗಿದ್ದೇನೆ. ವ್ಯಕ್ತಿಯಾಗಿ ನಟಿಯಾಗಿ ಬದಲಾವಣೆ ಕಾಣುತ್ತಿದ್ದೇನೆ ಎಂದು ಸಮಂತಾ ಹೇಳಿದ್ದಾರೆ.
ಶಾಕುಂತಲಂ ಸಿನಿಮಾದ ಲುಕ್ ಟೆಸ್ಟ್ ಮಾಡಿಸಿದಾಗ ಸಮಂತಾಗೆ ಇದು ಆಗುವ ಕೆಲಸ ಅಲ್ಲ ಎನಿಸಿತಂತೆ. ಏಕೆಂದರೆ ಜಿಮ್ನಲ್ಲಿ ಅತಿಯಾಗಿ ವರ್ಕೌಟ್ ಮಾಡಿ ಕೈ, ಹೊಟ್ಟೆ ಭಾಗವೆಲ್ಲ ಬಹಳ ಬದಲಾಗಿಬಿಟ್ಟಿದ್ದವಂತೆ. ಶಾಕುಂತಲಾ ರೀತಿಯ ರಾಣಿಯ ಪಾತ್ರಕ್ಕೆ ಬೇಕಾದ ದೇಹ ಅವರದ್ದಾಗಿರಲಿಲ್ಲವಂತೆ. ಆದರೆ ನಿರ್ದೇಶಕ ಗುಣಶೇಖರ್ ಸಮಯ ನೀಡಿ ದೇಹವನ್ನು ಪಾತ್ರಕ್ಕೆ ಹೊಂದುವ ರೀತಿಯಲ್ಲಿ ಬದಲಾಯಿಸಿಕೊಳ್ಳಲು ಸೂಚಿಸಿದ್ದಾರೆ. ಬಳಿಕ ಜಿಮ್ನಲ್ಲಿ ವೇಟ್ಲಿಫ್ಟಿಂಗ್ ಇನ್ನಿತರೆಗಳನ್ನು ತಗ್ಗಿಸಿ ಪಾತ್ರಕ್ಕೆ ಹೊಂದುವಂತೆ ತಮ್ಮನ್ನು ಬದಲಾಯಿಸಿಕೊಂಡಿದ್ದಾರೆ ಸಮಂತಾ.
ಶಾಕುಂತಲಾ ಪಾತ್ರದ ಜೊತೆಗೆ ತಮ್ಮನ್ನು ಕನೆಕ್ಟ್ ಮಾಡಿಕೊಳ್ಳುವ ಸಮಂತಾ, ಆಕೆ ಜೀವನದಲ್ಲಿ ಅದೆಷ್ಟು ಕಷ್ಟಗಳನ್ನು ಅನುಭವಿಸಿದ್ದಾಳೆ. ಆದರೆ ಎಲ್ಲವನ್ನೂ ಬಹಳ ತಾಳ್ಮೆಯಿಂದ, ಗೌರವಯುತವಾಗಿ ಒಪ್ಪಿಕೊಂಡು ಅವನ್ನು ಎದುರಿಸಿದ್ದಾರೆ. ಅದೆಷ್ಟು ಸಾವಿರ ವರ್ಷಗಳ ಹಿಂದಿನ ಕತೆಯಾದರೂ ಆ ಕತೆ ಶಾಕುಂತಲಾ ಪಾತ್ರ ಇಂದಿಗೂ ಸಲ್ಲುತ್ತದೆ ಎಂದು ಸಮಂತಾ ಶಾಕುಂತಲಂ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ.