ಕಳೆದ ಕೆಲ ದಿನಗಳಿಂದ ಭಾರತದ ವಿರುದ್ಧ ಹೇಳಿಕೆ ನೀಡುವ ಮೂಲಕ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ವಿವಾದ ಹುಟ್ಟುಹಾಕಿದ್ದಾರೆ. ಇದೀಗ ಕೆನಡಾ ಸರ್ಕಾರವು ಮುಂದಿನ ವರ್ಷದಿಂದ ತನ್ನ ಜನಸಂಖ್ಯೆಗೆ ತಕ್ಕಂತೆ ವಲಸಿಗರಿಗೆ ವೀಸಾ ನೀಡುವ ಪ್ರಮಾಣದಲ್ಲಿ ಶೇಕಡಾ 20ರಷ್ಟು ಕಡಿತಗೊಳಿಸಲು ಮುಂದಾಗಿದ್ದಾರೆ.
ಕೋವಿಡ್ ಸಮಯದಲ್ಲಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಅವರು, 2025-2026 ರಲ್ಲಿ ತಲಾ 5 ಲಕ್ಷ ವಲಸಿಗರಿಗೆ ಅವಕಾಶ ನೀಡುವುದಾಗಿ ಘೋಷಿಸಿದ್ದಾಗ, ಉದ್ಯೋಗಿಗಳ ಅಗತ್ಯಗಳನ್ನು ಪರಿಹರಿಸುವ ಮತ್ತು ಜನಸಂಖ್ಯೆಯ ಬೆಳವಣಿಗೆಯನ್ನು ನಿರ್ವಹಿಸುವ ನಡುವೆ ಸರಿಯಾದ ಸಮತೋಲನ ಹೊಂದಿರಲಿಲ್ಲ ಎಂದು ಒಪ್ಪಿಕೊಂಡಿದ್ದರು.
ಇದೀಗ ಕೆನಡಾ ಸರ್ಕಾರದ ಹೊಸ ಯೋಜನೆಯ ಪ್ರಕಾರ, 2025 ರಲ್ಲಿ 3.95 ಲಕ್ಷ ಹೊಸ ಖಾಯಂ ನಿವಾಸಿಗಳಿಗೆ ಅವಕಾಶ ನೀಡಲಾಗುವುದು, ಅದು ಈ ವರ್ಷದ 4.85 ಲಕ್ಷದಿಂದ ಕಡಿಮೆಯಾಗಿದೆ. 2026 ಮತ್ತು 2027 ರ ಪರಿಷ್ಕೃತ ಗುರಿಗಳು ಕ್ರಮವಾಗಿ 3.8 ಲಕ್ಷ ಮತ್ತು 3.65 ಲಕ್ಷಗಳಾಗಿವೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ವಿದ್ಯಾರ್ಥಿ ವೀಸಾಗಳನ್ನು ಸುಮಾರು ಶೇಕಡಾ 35 ರಷ್ಟು ಕಡಿತಗೊಳಿಸಿದ ನಂತರ ಈ ಪ್ರಕಟಣೆ ಬಂದಿದೆ. ಇದಲ್ಲದೆ, ವಿದ್ಯಾರ್ಥಿ ವೀಸಾಗಳನ್ನು ಎರಡು ವರ್ಷಗಳವರೆಗೆ 3,60,000 ಕ್ಕೆ ಮಿತಿಗೊಳಿಸಲಾಯಿತು.
ಜಸ್ಟಿನ್ ಟ್ರುಡೋ ಅವರ ನಿರ್ಧಾರವು ಭಾರತೀಯರ ಮೇಲೆ ದೊಡ್ಡ ರೀತಿಯಲ್ಲಿ ಪರಿಣಾಮ ಬೀರುವ ನಿರೀಕ್ಷೆಯಿದೆ. 2023 ರಲ್ಲಿ ಕೆನಡಾದಲ್ಲಿ ಭಾರತದ ಸುಮಾರು 3,19,000 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದರು. ವಿದ್ಯಾರ್ಥಿ ವೀಸಾಗಳಲ್ಲಿನ ಕಡಿತವು ಪ್ರಾಥಮಿಕವಾಗಿ ಕೆನಡಾದ ಅಂತಾರಾಷ್ಟ್ರೀಯ ವಿದ್ಯಾರ್ಥಿ ಜನಸಂಖ್ಯೆಯ ಶೇಕಡಾ 41ಕ್ಕಿಂತ ಹೆಚ್ಚು ಇರುವ ಭಾರತೀಯರ ಮೇಲೆ ಪರಿಣಾಮ ಬೀರಿತು.
ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಜಸ್ಟಿನ್ ಟ್ರುಡೋ, ನಾವು ಕೆನಡಾದಲ್ಲಿ ಕೆಲವು ವಿದೇಶಿಗರಿಗೆ ತಾತ್ಕಾಲಿಕ ಉದ್ಯೋಗ ವೀಸಾವನ್ನು ನೀಡಲಿದ್ದೇವೆ. ಕಂಪನಿಗಳು ಕೆನಡಾದ ಪ್ರಜೆಗಳಿಗೆ ಏಕೆ ಆಧ್ಯತೆ ನೀಡಿಲ್ಲ ಎಂಬುದಕ್ಕೆ ನಾವು ಕಠಿಣ ನಿಯಮಗಳನ್ನು ತರುತ್ತಿದ್ದೇವೆ ಎಂದರು. ಈ ಕ್ರಮವು ಕೆನಡಾದಲ್ಲಿ ನೆಲೆಸಿರುವ ವಲಸಿಗರಿಗೆ ಉದ್ಯೋಗಾವಕಾಶಗಳನ್ನು ಇನ್ನಷ್ಟು ಸಂಕೀರ್ಣಗೊಳಿಸುತ್ತದೆ ಎಂದು ಹೇಳಿದರು.
ಕೆನಡಾದ ಅಂಕಿಅಂಶ ಪ್ರಕಾರ, 2024 ರ ಎರಡನೇ ತ್ರೈಮಾಸಿಕದಲ್ಲಿ ಉದ್ಯೋಗಿಗಳು ಮತ್ತು ವಿದ್ಯಾರ್ಥಿಗಳು ಸೇರಿದಂತೆ 2.8 ಮಿಲಿಯನ್ ತಾತ್ಕಾಲಿಕ ನಿವಾಸಿಗಳನ್ನು ಹೊಂದಿದೆ.