ಬೀಜಿಂಗ್: ತೈವಾನ್ ಅಧ್ಯಕ್ಷೆ ಸಾಯ್ ಇಂಗ್ ವೆನ್ ಹಾಗೂ ಅಮೆರಿಕ ಸಂಸತ್ ಸ್ಪೀಕರ್ ಕೆವಿನ್ ಮೆಕಾರ್ಥಿ ಅವರ ಉದ್ದೇಶಿತ ಭೇಟಿಯನ್ನು ಚೀನಾ ವಿರೋಧಿಸಿದೆ. ಒಂದು ವೇಳೆ ಇಬ್ಬರು ನಾಯಕರು ಸಭೆ ನಡೆಸಿದ್ದೇ ಆದರೆ, ಅದಕ್ಕೆ ತಕ್ಕ ಉತ್ತರ ನೀಡಲಾಗುವುದು ಎಂದು ಚೀನಾ ಎಚ್ಚರಿಕೆಯನ್ನು ನೀಡಿದೆ.
‘ಉಭಯ ದೇಶಗಳ ನಾಯಕರ ಈ ಉದ್ದೇಶಿತ ಸಭೆಯನ್ನು ನಾವು ಖಂಡಿಸುತ್ತೇವೆ. ಈ ಸಭೆ ನಡೆದರೆ ದಿಟ್ಟ ಪ್ರತ್ಯುತ್ತರ ನೀಡುವುದು ಖಚಿತ’ ಎಂದು ತೈವಾನ್ ವ್ಯವಹಾರಗಳಿಗೆ ಸಂಬಂಧಿಸಿದ ವಕ್ತಾರ ಝು ಫೆಂಗ್ಲಿಯನ್ ತಿಳಿಸಿದ್ದಾರೆ.
ಏಪ್ರಿಲ್ 5ರಂದು ಸಾಯ್ ಅವರು ಲಾಸ್ ಏಂಜಲೀಸ್ನಲ್ಲಿ ಮೆಕಾರ್ಥಿ ಅವರನ್ನು ಭೇಟಿಯಾಗಿ, ದ್ವಿಪಕ್ಷೀಯ ಮಾತುಕತೆ ನಡೆಸುವ ಸಾಧ್ಯತೆ ಇದೆ. ತೈವಾನ್ ಮತ್ತು ಚೀನಾ ನಡುವಿನ ಸಂಘರ್ಷ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಅಲ್ಲದೇ, ತೈವಾನ್ ಮಿತ್ರ ರಾಷ್ಟ್ರಗಳ ಮೇಲೆ ಒತ್ತಡ ಹೇರುತ್ತಿರುವ ಚೀನಾ, ಆ ರಾಷ್ಟ್ರಗಳು ತೈವಾನ್ನೊಂದಿಗಿನ ಸಂಬಂಧ ಕಡಿದುಕೊಳ್ಳುವಂತೆ ಮಾಡುತ್ತಿದೆ. ತನ್ನ ಮಿಲಿಟರಿ ಶಕ್ತಿಯನ್ನು ಪ್ರದರ್ಶಿಸುವ ಮೂಲಕ ದ್ವೀಪರಾಷ್ಟ್ರ ತೈವಾನ್ಗೆ ಎಚ್ಚರಿಕೆ ಸಂದೇಶ ರವಾನಿಸುವ ಕೆಲಸವನ್ನೂ ಮಾಡುತ್ತಿದೆ.