ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಟಿಕೆಟ್ ದರ 200 ರೂ.ಗೆ ನಿಗದಿಪಡಿಸುವಂತೆ ಚಲನಚಿತ್ರ ವಾಣಿಜ್ಯ ಮಂಡಳಿ ಸದಸ್ಯರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.
ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸುರೇಶ್, ಸಾ.ರಾ ಗೋವಿಂದು ನೇತೃತ್ವದ ನಿಯೋಗ ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಿ, ಎಲ್ಲಾ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳ ಟಿಕೆಟ್ ದರ 200 ರೂ.ಗೆ ನಿಗದಿಪಡಿಸುವಂತೆ ಕೇಳಿ ಕೊಂಡಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಸಾ.ರಾ ಗೋವಿಂದು, ಇತ್ತೀಚೆಗೆ ಮಲ್ಟಿಪ್ಲೆಕ್ಸ್ ಸೇರಿದಂತೆ ಚಿತ್ರಮಂದಿರಗಳಲ್ಲಿ ಪ್ರವೇಶ ದರ ದುಬಾರಿಯಾಗಿದ್ದು, ಸಾವಿರದಿಂದ ಒಂದೂವರೆ ಸಾವಿರ ರೂಪಾಯಿವರೆಗೂ ಟಿಕೆಟ್ ದರ ನಿಗದಿಪಡಿಸಲಾಗುತ್ತಿದೆ. ಇದರಿಂದ ಕನ್ನಡ ಪ್ರೇಕ್ಷಕರಿಗೆ ಹೊರೆಯಾಗಿರುತ್ತದೆ. ಹಾಗಾಗಿ ಟಿಕೆಟ್ ದರ 200 ರೂ. ಮೀರದಂತೆ ನಿಗದಿಪಡಿಸುವಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಸಿಎಂಗೆ ಮನವಿ ಪತ್ರ ಸಲ್ಲಿಸಿದ್ದೇವೆ ಎಂದು ತಿಳಿಸಿದ್ದಾರೆ.
ಈ ಹಿಂದೆ ಇದೇ ರೀತಿ ವಾರ್ತಾ ಇಲಾಖೆಯ ಮೂಲಕ ಆದೇಶ ಹೊರಡಿಸಲಾಗಿತ್ತು. ಈ ಆದೇಶವನ್ನು ಪ್ರಶ್ನಿಸಿ ಅಧಿಕಾರ ವ್ಯಾಪ್ತಿಗೆ ಒಳಪಡುವುದಿಲ್ಲವೆಂದು ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳ ಮಾಲೀಕರು ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿದ್ದಾರೆ. ತಡೆಯಾಜ್ಞೆ ತೆರವುಗೊಳಿಸಿ ಸರ್ಕಾರ ಟಿಕೆಟ್ ದರ ನಿಗದಿಪಡಿಸಬೇಕೆಂದು ಮನವಿ ಮಾಡಿದ್ದೇವೆ ಎಂದಿದ್ದಾರೆ.
ದುಬಾರಿ ಪ್ರವೇಶದರದಿಂದ ಚಿತ್ರಮಂದಿರದಲ್ಲಿ ಚಿತ್ರ ವೀಕ್ಷಿಸಲು ಪ್ರೇಕ್ಷಕರು ಗಣನೀಯ ಪ್ರಮಾಣದಲ್ಲಿ ಕುಂಠಿತಗೊಂಡು ಚಿತ್ರ ನಿರ್ಮಾಣಕ್ಕೆ ಹಾಕಿದ ಬಂಡವಾಳ ವಾಪಸ್ ಪಡೆಯಲು ಕಷ್ಟಸಾಧ್ಯವಾಗುತ್ತಿದೆ. ಹಾಗಾಗಿ ಕೂಡಲೇ 200 ರೂ. ಮೀರದಂತೆ ಪ್ರವೇಶದರ ನಿಗದಿಪಡಿಸಲು ಕೋರಿದ್ದೇವೆ. ಈಗಾಗಲೇ ನೆರೆರಾಜ್ಯಗಳಾದ ತೆಲಂಗಾಣ, ಆಂಧ್ರಪ್ರದೇಶ ಮತ್ತು ಚೆನ್ನೈ ಮಲ್ಟಿಪ್ಲೆಕ್ಸ್ಗಳಲ್ಲಿ 150 ರೂ. ನಿಂದ 200 ರೂ. ಪ್ರವೇಶದರ ನಿಗದಿಪಡಿಸಲಾಗಿದೆ. ನಮ್ಮಲ್ಲೂ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ 150 ರೂ.ನಿಂದ 200 ರೂ.ಗೆ ಟಿಕೆಟ್ ದರ ನಿಗದಿ ಮಾಡಿ ಸರ್ಕಾರದಿಂದಲೇ ಆದೇಶ ಹೊರಡಿಸುವಂತೆ ಪತ್ರದಲ್ಲಿ ಉಲ್ಲೇಖಿಸಿರುವುದಾಗಿ ತಿಳಿಸಿದ್ದಾರೆ.