ಬೆಂಗಳೂರು: ದೇಶದಾದ್ಯಂತ ರಾಮನವಮಿಯನ್ನು (Ram Navami) ಶ್ರದ್ಧೆ, ಸಂಭ್ರಮ ಮತ್ತು ಸಡಗರಗಳಿಂದ ಆಚರಿಸಲಾಗುತ್ತಿದೆ. ನಗರದ ಎಲ್ಲ ರಾಮಮಂದಿರ (Ram Mandir), ಆಂಜನೇಯ ಮತ್ತು ಶ್ರೀಕೃಷ್ಟ ದೇವಸ್ಥಾನಗಳನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿದೆ ಮತ್ತು ಅರ್ಚಕರು ಹೋಮ, ಹವನ, ಪೂಜಾ ಕೈಂಕರ್ಯಗಳನ್ನು ನೆರವೇರಿಸುತ್ತಿದ್ದಾರೆ.
ಯಶವಂತಪುರದ ಇಸ್ಕಾನ್ ದೇವಸ್ಥಾನದಲ್ಲಿ (ISKCON temple) ರಾಮನವಮಿ ಪ್ರಯುಕ್ತ ವಿಶೇಷ ಪೂಜೆ ಏರ್ಪಡಿಸಿ ಭಕ್ತಾದಿಗಳಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ರಾಮಮಂದಿರ ಮತ್ತು ಆಂಜನೇಯನ ದೇವಸ್ಥಾನಗಳಲ್ಲಿ ಭಕ್ತರಿಗೆ ಮಜ್ಜಿಗೆ, ಪಾನಕ ಮತ್ತು ಕೋಸಂಬರಿ ವಿತರಣೆ ಮಾಡಲಾಗುತ್ತಿದೆ. ಹಬ್ಬದ ಅಂಗವಾಗಿ ಬೆಂಗಳೂರಿನ ನಾನಾಭಾಗಗಳಲ್ಲಿ ಭಜನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.