ಬೆಳಗಾವಿ:- ಬೆಳಗಾವಿ ಜಿಲ್ಲಾಸ್ಪತ್ರೆ ಬಿಮ್ಸ್ ಎಂದೇ ಕರೆಯಲ್ಪಡುವ ಈ ಆಸ್ಪತ್ರೆಯಲ್ಲಿ ಇದೀಗ ಮತ್ತೊಂದು ಅದ್ವಾನ ನಡೆದು ಹೋಗಿದೆ. ಮಹಾರಾಷ್ಟ್ರದ ಕೆಲ ತಾಲೂಕುಗಳಿಂದ ಹಾಗೂ ಗೋವಾದ ಕೆಲ ಭಾಗದಿಂದ ಸಾಕಷ್ಟು ರೋಗಿಗಳು ಈ ಬಿಮ್ಸ್ ಆಸ್ಪತ್ರೆಗೆ ಬರುತ್ತಾರೆ. ಅಪಘಾತ, ಹೆರಿಗೆಗೆ ಹೆಚ್ಚಿನ ಪ್ರಮಾಣದಲ್ಲಿ ಚಿಕಿತ್ಸೆಗೆ ಜನ ದಾಖಲಾಗುತ್ತಾರೆ.
ನಿತ್ಯ ಸಾವಿರಾರು ರೋಗಿಗಳು ಬಂದು ಹೋಗುವ ಈ ಆಸ್ಪತ್ರೆಯಲ್ಲಿ ಕಂದಮ್ಮಗಳು ಸಾವನ್ನಪ್ಪುತ್ತಿರುವ ವಿಷಯ ದೊಡ್ಡ ಮಟ್ಟದ ಚರ್ಚೆ ಹುಟ್ಟು ಹಾಕಿದೆ. ಅಧಿಕಾರಿಗಳು ಹಾಗೂ ಕೆಲ ವೈದ್ಯರ ಬೇಜವಾಬ್ದಾರಿಯಿಂದ ಬದುಕಿ ಬಾಳಬೇಕಿದ್ದ ಕಂದಮ್ಮಗಳು ಈಗ ಉಸಿರು ಚೆಲ್ಲುತ್ತಿವೆ.
ಬಿಮ್ಸ್ ಆಸ್ಪತ್ರೆಯಲ್ಲಿ ನಿತ್ಯ ಸುಮಾರು ಇಪ್ಪತ್ತರಿಂದ ಮೂವತ್ತು ಹೆರಿಗೆಗಳು ತಿಂಗಳಿಗೆ 800 ಹೆರಿಗೆಗಳು ಇಲ್ಲಿ ಆಗುತ್ತಿವೆ. ಆದರೆ ಕಳೆದ 3 ತಿಂಗಳಿನಲ್ಲಿ 41 ಶಿಶುಗಳು ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಖುದ್ದು ಸಾವಿನ ಕುರಿತು ಆಸ್ಪತ್ರೆಯ ಆಡಳಿತ ಮಂಡಳಿಯವರೇ ಒಪ್ಪಿಕೊಂಡಿದ್ದು ಹೀಗಾಗಿ ಜನರಿಗೆ ಸಾಕಷ್ಟು ಆತಂಕ ಹುಟ್ಟುವಂತೆ ಮಾಡಿದೆ.
ಆಗಸ್ಟ್ನಲ್ಲಿ 12 ಮಕ್ಕಳು ಸೆಪ್ಟಂಬರ್ನಲ್ಲಿ 18 ಮತ್ತು ಅಕ್ಟೋಬರ್ನಲ್ಲಿ 11 ಶಿಶುಗಳು ಮೃತಪಟ್ಟಿವೆ. ಆಸ್ಪತ್ರೆಯಲ್ಲಿರುವ ಏರ್ ಕಂಪ್ರೆಸರ್ ಕೆಟ್ಟು ಹೋಗಿದ್ದರಿಂದ ಶಿಶುಗಳು ಸಾವನ್ನಪ್ಪುತ್ತಿವೆ. ಆಸ್ಪತ್ರೆಯಲ್ಲಿ ಎರಡು ಏರ್ ಕಂಪ್ರೆಸರ್ ಇದ್ದು ಎರಡರ ಪೈಕಿ ಒಂದು ಮೂರು ತಿಂಗಳ ಹಿಂದೆ ಕೆಟ್ಟು ಹೋಗಿದ್ದು ಅದನ್ನ ರಿಪೇರಿ ಕೂಡ ಮಾಡಿಲ್ಲ. ಇದರಿಂದ ಆಕ್ಸಿಜನ್ ಸರಿಯಾಗಿ ಸಿಗದೇ ಹೆಚ್ಚು ಕಂದಮ್ಮಗಳು ಸಾವಾಗುತ್ತಿವೆ ಎಂಬ ದೂರುಗಳು ಕೇಳಿ ಬಂದಿವೆ.