ಖ್ಯಾತ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ವಿರುದ್ಧ ಸಹ ಕಲಾವಿದೆ ಅತ್ಯಾಚಾರ ಆರೋಪ ಮಾಡಿದ್ದಾರೆ. ಇದೇ ಕಾರಣಕ್ಕೆ ಸುಮಾರು ಒಂದು ತಿಂಗಳ ಕಾಲ ಜೈಲಿನಲ್ಲಿದ್ದ ಜಾನಿ ಮಾಸ್ಟರ್ ಇದೀಗ ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಜೈಲಿನಿಂದ ಆಚೆ ಬರುತ್ತಿದ್ದಂತೆಯೇ ಅವರು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು ವಿಡಿಯೋದಲ್ಲಿ ಹೆಂಡತಿ ಮತ್ತು ಮಕ್ಕಳನ್ನು ಭೇಟಿ ಮಾಡಿದ ಎಮೋಷನಲ್ ಕ್ಷಣ ಇದೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ನೋಡಿದ ಅನೇಕರು ಜಾನಿ ಮಾಸ್ಟರ್ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.
‘ಕಳೆದ 37 ದಿನಗಳಲ್ಲಿ ನಮ್ಮಿಂದ ಸಾಕಷ್ಟನ್ನು ಕಸಿದುಕೊಳ್ಳಲಾಗಿದೆ. ನನ್ನ ಕುಟುಂಬದವರು ಮತ್ತು ಹಿತೈಷಿಗಳ ಪ್ರಾರ್ಥನೆಯಿಂದ ನಾನು ಇಂದು ಇಲ್ಲಿ ಇದ್ದೇನೆ. ಸತ್ಯಕ್ಕೆ ಆಗಾಗ ಕತ್ತಲು ಕವಿದಿರುತ್ತದೆ. ಆದರೆ ಸತ್ಯ ನಾಶ ಆಗುವುದಿಲ್ಲ. ಅದು ಒಂದು ದಿನ ಗೆದ್ದೇ ಗೆಲ್ಲುತ್ತದೆ. ನನ್ನ ಜೀವನದ ಈ ಹಂತದಲ್ಲಿ ಕುಟುಂಬವರು ಅನುಭವಿಸಿದ ಕಷ್ಟ ನನ್ನ ಹೃದಯವನ್ನು ಯಾವಾಗಲೂ ಚುಚ್ಚುತ್ತದೆ’ ಎಂದು ಈ ವಿಡಿಯೋ ಜೊತೆ ಜಾನಿ ಮಾಸ್ಟರ್ ಅವರು ಕ್ಯಾಪ್ಷನ್ ಬರೆದುಕೊಂಡಿದ್ದಾರೆ.
ಜಾನಿ ಮಾಸ್ಟರ್ ನಿರಪರಾಧಿ ಎಂಬುದು ಇನ್ನೂ ಸಾಬೀತಾಗಿಲ್ಲ. ಸದ್ಯಕ್ಕೆ ಅವರಿಗೆ ಸಿಕ್ಕಿರುವುದು ಜಾಮೀನು ಮಾತ್ರ. ಹಾಗಿದ್ದರೂ ಕೂಡ ಅವರು ಸಮಾಜಸೇವೆ ಮಾಡಿ ಜೈಲಿಗೆ ಹೋಗಿ ಬಂದವರಂತೆ ಈ ವಿಡಿಯೋವನ್ನು ಹಂಚಿಕೊಂಡಿರುವುದಕ್ಕೆ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ನಮಗೆ ನಿಮ್ಮ ಕುಟುಂಬದ ನೋವು ಏನು ಎಂಬುದು ಗೊತ್ತಾಗುತ್ತದೆ. ಆದರೆ ನೀವು ಇನ್ನೂ ಆರೋಪಿ. ಸಮಾಜ ಸೇವೆ ಮಾಡಿ ನೀವೇನು ಜೈಲಿಗೆ ಹೋಗಿಲ್ಲ ಅಥವಾ ಒಲೆಂಪಿಕ್ಸ್ ಪದಕ ಗೆದ್ದು ಮನೆಗೆ ಬಂದಿಲ್ಲ’ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಆದರೆ ನಾನಿ ಮಾಸ್ಟರ್ ಅವರ ಅಪ್ಪಟ ಅಭಿಮಾನಿಗಳು ಅವರಿಗೆ ಸ್ವಾಗತ ಕೋರಿದ್ದಾರೆ. ಆದಷ್ಟು ಬೇಗ ನ್ಯಾಯ ಸಿಗಲಿ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.
ಕನ್ನಡ, ಹಿಂದಿ, ತಮಿಳು, ತೆಲುಗು ಮುಂತಾದ ಭಾಷೆಯ ಸಿನಿಮಾಗಳಿಗೆ ಜಾನಿ ಮಾಸ್ಟರ್ ಅವರು ನೃತ್ಯ ನಿರ್ದೇಶನ ಮಾಡಿದ್ದಾರೆ. ಕನ್ನಡದಲ್ಲಿ ‘ರಾ ರಾ ರಕ್ಕಮ್ಮ.. ಸೇರಿದಂತೆ ಇನ್ನೂ ಹಲವು ಹಾಡುಗಳಿಗೆ ಕೊರಿಯೋಗ್ರಾಫಿ ಮಾಡಿದ್ದಾರೆ. ಜಾನಿ ಮಾಸ್ಟರ್ ಗೆ ಚಿತ್ರರಂಗದಲ್ಲಿ ಸಖತ್ ಬೇಡಿಕೆ ಇದೆ. ಆದರೆ ಅತ್ಯಾಚಾರ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಹಲವು ಸಿನಿಮಾಗಳು ಅವರನ್ನು ಚಿತ್ರತಂಡ ಹೊರ ಗಿಟ್ಟಿವೆ. ಅಲ್ಲದೆ ಸದ್ಯದಲ್ಲೇ ತೆರೆಕಾಣಲು ಸಿದ್ದವಾಗಿರುವ ಬಹುನಿರೀಕ್ಷಿತ ಪುಷ್ಪ 2 ಸಿನಿಮಾ ತಂಡ ಕೂಡ ಜಾನಿ ಮಾಸ್ಟರ್ ಅವರನ್ನು ಚಿತ್ರದಿಂದ ಕೈ ಬಿಟ್ಟಿರುವುದಾಗಿ ತಿಳಿಸಿದೆ. ಇದು ಜಾನಿ ಮಾಸ್ಟರ್ ಅಭಿಮಾನಿಗಳಿಗೆ ಸಾಕಷ್ಟು ನೋವುಂಟು ಮಾಡಿದೆ.