ತಮಿಳಿನ ಸ್ಟಾರ್ ನಟ ದಳಪತಿ ವಿಜಯ್ ರಾಜಕೀಯ ಇನ್ನಿಂಗ್ಸ್ ಆರಂಭಿಸಿದ್ದಾರೆ. ರಾಜಕೀಯ ಎಂಟ್ರಿ ಬಳಿಕ ಇದೇ ಮೊದಲ ಬಾರಿಗೆ ಬೃಹತ್ ರಾಜಕೀಯ ಸಮಾವೇಶ ನಡೆಸಿದ್ದಾರೆ. ತಮಿಳಿಗ ವೆಟ್ರಿ ಕಳಗಂ ಪಕ್ಷದ ತತ್ವ-ಸಿದ್ಧಾಂತ, ಗುರಿಗಳನ್ನು ಸಾರ್ವಜನಿಕಗೊಳಿಸಿದ್ದಾರೆ. ಸಮಾವೇಶದಲ್ಲಿ ಲಕ್ಷಾಂತರ ಅಭಿಮಾನಿಗಳು ಭಾಗಿಯಾಗುವ ಮೂಲಕ ದಳಪತಿ ವಿಜಯ್ ಗೆ ಸಾಥ್ ನೀಡಿದ್ದಾರೆ.
ವಿಜಯ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ವಿಜಯ್ ನಟನೆಯ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ದೂಳೆಬ್ಬಿಸುತ್ತಿವೆ. ವಿಜಯ್ ಸಿನಿಮಾವೊಂದಕ್ಕೆ ನೂರಾರು ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ. ವೃತ್ತಿ ಜೀವನ ಉತ್ತುಂಗದಲ್ಲಿರುವಾಗ್ಲೆ ವಿಜಯ್ ರಾಜಕೀಯಕ್ಕೆ ಎಂಟ್ರಿಕೊಡ್ತಿದ್ದು ಚಿತ್ರರಂಗಕ್ಕೆ ಗುಡ್ ಬೈ ಹೇಳ್ತಿದ್ದಾರೆ.
ಕಳೆದ ಫೆಬ್ರವರಿಯಲ್ಲಿ ತಮಿಳಿಗ ವೆಟ್ರಿ ಕಳಗಂ ಎಂಬ ಹೊಸ ರಾಜಕೀಯ ಪಕ್ಷ ಘೋಷಿಸಿದ್ದ ವಿಜಯ್ ಇಂದು ಇದೇ ಮೊದಲ ಬಾರಿಗೆ ಸಾರ್ವಜನಿಕ ಸಮಾವೇಶ ನಡೆಸಿದ್ದಾರೆ. ಈ ಮೂಲಕ ತಮ್ಮ ಶಕ್ತಿ ಪ್ರದರ್ಶಿಸಿದ್ದಾರೆ. ಚೆನ್ನೈನಿಂದ 154 ಕಿ.ಮೀ ದೂರದಲ್ಲಿರುವ ವಿಲ್ಲುಪುರಂ ಬಳಿಯ ವಿಕ್ರವಂಡಿಯಲ್ಲಿ ಮೊದಲ ರಾಜಕೀಯ ಸಮಾವೇಶ ನಡೆಸಿದ್ದು ಸುಮಾರು ಐದರಿಂದ ಆರು ಲಕ್ಷ ಮಂದಿ ರ್ಯಾಲಿಯಲ್ಲಿ ಭಾಗವಹಿಸಿದ್ದರು. ರ್ಯಾಲಿ ನಡೆದ ಜಾಗದಲ್ಲಿ ಭರ್ಜರಿ ಟ್ರಾಫಿಕ್ ಜಾಮ್ ಆಗಿತ್ತು. ತಡರಾತ್ರಿವರೆಗೂ ಟ್ರಾಫಿಕ್ ಹಾಗೆಯೇ ಇತ್ತು.
ಇನ್ನು ಸಮಾವೇಶದ ಸುತ್ತ ವಿಚಾರವಾದಿ ದ್ರಾವಿಡ ಧೀಮಂತ ‘ಪೆರಿಯಾರ್’ ಇವಿ ರಾಮಸಾಮಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಕೆ ಕಾಮರಾಜ್, ಹಿಂದಿನ ತಮಿಳುನಾಡು ಆಳಿದ್ದ ರಾಜ-ಮಹಾರಾಜರು, ಹಾಗೂ ರಾಜಕೀಯ ದಿಗ್ಗಜರ ಬೃಹತ್ ಕಟೌಟ್ಗಳು ರಾರಾಜಿಸಿದ್ವು.
ಬಳಿಕ ಬೃಹತ್ ಜನಸ್ತೋಮ ಉದ್ದೇಶಿಸಿ ಇದೇ ಮೊದಲ ಬಾರಿಗೆ ರಾಜಕೀಯ ಭಾಷಣ ಮಾಡಿದ ದಳಪತಿ ವಿಜಯ್ ತಮ್ಮ ಪಕ್ಷದ ತತ್ವಗಳು ಹಾಗೂ ಸೈದ್ಧಾಂತಿಕ ದೃಷ್ಟಿಕೋನವನ್ನು ಘೋಷಿಸಿದ್ರು. ಪಕ್ಷದ ನೀತಿಗಳು ಹಾಗೂ ಕಾರ್ಯಕ್ರಮಗಳನ್ನು ಸಾರ್ವಜನಿಕಗೊಳಿಸಿದ್ರು.
ಇನ್ನು ದಳಪತಿ ವಿಜಯ್ ಟಿವಿಕೆ ಪಕ್ಷ 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಗುರಿ ಹೊಂದಿದೆ. ನಟ ದಳಪತಿ ವಿಜಯ್ ರಾಜಕೀಯ ಆಗಮನ ದೇಶಾದ್ಯಂ ಭಾರಿ ಗಮನ ಸೆಳೆದಿದೆ. 3 ದಶಕಗಳ ಕಾಲ ತಮಿಳು ಚಿತ್ರರಂಗ ಆಳುವ ಮೂಲಕ ಅಭಿಮಾನಿಗಳ ದೇವರು ಎನಿಸಿರುವ ವಿಜಯ್ 68 ಸಿನಿಮಾಗಳಲ್ಲಿ ನಟಿಸಿದ್ದಾರೆ. ರಾಜಕೀಯಕ್ಕೆ ಎಂಟ್ರಿಕೊಟ್ಟಿರುವ ವಿಜಯ್ ಬಗ್ಗೆ ಪ್ರತಿಯೊಬ್ಬರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ದಳಪತಿಯ ರಾಜಕೀಯ ಹಾದಿ ಸಿಕ್ಕಾಪಟ್ಟೆ ನಿರೀಕ್ಷೆಗಳನ್ನು ಹುಟ್ಟುಹಾಕಿದೆ.