ಮಂಗಳೂರು: ಒಂದು ಕಡೆ ನಾವು ಜಾತ್ಯಾತೀತರು ಎನ್ನುವುದು. ಇನ್ನೊಂದು ಎಲ್ಲಾ ವಲಯದಲ್ಲೂ ಅದನ್ನ ಪೋಷಿಸುವುದು. ಜಾತಿ ವ್ಯವಸ್ಥೆಯನ್ನು ಅನಿಷ್ಟಗಳಿಗೆ ಮೂಲ ಎನ್ನುವವರೇ ಅದನ್ನು ಪೋಷಿಸುತ್ತಿದ್ದಾರೆ ಎಂದು ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಜಾತ್ಯಾತೀತ ಅಂತ ಹೇಳಿಕೊಳ್ಳುವಾಗ ಇಲ್ಲಿ ಜಾತಿ ಪಂಗಡಗಳ ಲೆಕ್ಕಾಚಾರ ಯಾಕೆ ಎಂದು ಉಡುಪಿ ಪೇಜಾವರ ಪ್ರಶ್ನಿಸಿ ಪರಿಷತ್ ಕಾಂಗ್ರೆಸ್ ಸದಸ್ಯ ಬಿಕೆ ಹರಿಪ್ರಸಾದ್ ವಿರುದ್ದ ಅವರು ಪರೋಕ್ಷ ವಾಗ್ದಾಳಿ ನಡೆಸಿದರು
ಮಂಗಳೂರಿನ ಕುಳಾಯಿ ಚಿತ್ರಾಪುರ ಮಠದಲ್ಲಿ ನಡೆದ ಧರ್ಮಸಭೆಯಲ್ಲಿ ಮಾತನಾಡಿದ ಅವರು, ನಾವು ಹೇಳಿದ್ದು ತಪ್ಪಂತೆ. ಪುಡಿ ರಾಜಕಾರಣ ಮಾಡುತ್ತಿದ್ದೇವೆ ಎನ್ನುತ್ತಾರೆ. ಹಾಗಾದರೆ ಇದು ಪ್ರಜಾಪ್ರಭುತ್ವ ರಾಷ್ಟ್ರ ಹೌದೋ ಅಲ್ವೋ ಹೇಳಿ ಎಂದಿದ್ದಾರೆ. ಹೌದು ಅಂತಾದ್ರೆ ಒಬ್ಬ ಮಾಠಾಧಿಪತಿಗೆ ಅಂತಲ್ಲ, ಸಾಮಾನ್ಯ ಪ್ರಜೆಗೂ ಮಾತಾಡುವ ಹಕ್ಕಿದೆ. ಹೀಗಿರುವಾಗ ಕಾವಿ ತೆಗೆದಿಟ್ಟು ಬಂದರೆ ಉತ್ತರ ಕೊಡುತ್ತೇನೆ ಎನ್ನುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಸಮಾಜದಲ್ಲಿ ಮಾತನಾಡುವ ಹಕ್ಕು ಇರುವುದು ಕೆಲವು ರಾಜಕಾರಣಿಗಳಿಗೆ ಮಾತ್ರವೇ? ಪ್ರಜೆಗಳಿಗೂ ಹಕ್ಕಿಲ್ಲ, ರಾಜಕಾರಣಿಗಳಿಗೆ ಮಾತ್ರ ಹಕ್ಕಿದೆ ಅಂತ ಹೇಳಲಿ. ಪ್ರಜಾಪ್ರಭುತ್ವ ಸತ್ತು ಹೋಯ್ತು, ಈಗ ಇರೋದು ರಾಜಕಾರಣಿಗಳ ರಾಜ್ಯ ಅಂತ ಹೇಳಿ ಬಿಡಲಿ. ಹಾಗಿಲ್ಲ ಅಂತಾದ್ರೆ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪೀಠಾಧಿಪತಿ ಮಾತ್ರ ಅಲ್ಲ, ಸಾಮಾನ್ಯ ಪ್ರಜೆಗೂ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕಿರಲೇಬೇಕು. ಹಾಗಾಗಿ ನಾವು ಅದನ್ನ ಮಾತ್ರ ಮಾಡಿದ್ದೇವೆಯೇ ಹೊರತು ಬೇರೆ ಮಾಡಿಲ್ಲ ಎಂದು ಹೇಳಿದರು.