ಬೆಳಗಾವಿ: ಬಿಜೆಪಿ (BJP), ಕಾಂಗ್ರೆಸ್ (Congress) ಎರಡೂ ಹೈಕಮಾಂಡ್ಗಳಿಗೆ ದಿ.ಆನಂದ ಮಾಮನಿ ಪ್ರತಿನಿಧಿಸುತ್ತಿದ್ದ ಸವದತ್ತಿ ಕ್ಷೇತ್ರ ಕಗ್ಗಂಟಾಗಿ ಪರಿಣಮಿಸಿದ್ದು, ಸವದತ್ತಿ ಮತಕ್ಷೇತ್ರದ ಟಿಕೆಟ್ಗಾಗಿ ಆಕಾಂಕ್ಷಿಗಳ ನಡುವೆ ತೀವ್ರ ಪೈಪೋಟಿ ಎದ್ದಿದೆ.
ಜಿಲ್ಲೆಯ ಸವದತ್ತಿ ಕ್ಷೇತ್ರ ಶಕ್ತಿದೇವತೆ ಸವದತ್ತಿ ಯಲ್ಲಮ್ಮ ಕ್ಷೇತ್ರದಲ್ಲಿ ಟಿಕೆಟ್ ಫೈಟ್ ಜೋರಾಗಿದ್ದು, ಬಿಜೆಪಿ ಟಿಕೆಟ್ಗಾಗಿ ಮಾಮನಿ ಕುಟುಂಬದಲ್ಲಿಯೇ ತೀವ್ರ ಪೈಪೋಟಿ ನಡೆಯುತ್ತಿದೆ. ಡೆಪ್ಯುಟಿ ಸ್ಪೀಕರ್ ದಿವಂಗತ ಆನಂದ ಮಾಮನಿ ಪತ್ನಿ ರತ್ನಾ ಮಾಮನಿ, ಸೋದರ ಸಂಬಂಧಿ ವಿರೂಪಾಕ್ಷ ಮಾಮನಿ (Virupaksha Mamani) ಮಧ್ಯೆ ಫೈಟ್ ನಡೆಯುತ್ತಿದೆ. ಇತ್ತ ಮಾಮನಿ ಕುಟುಂಬಕ್ಕೆ ಪಕ್ಷ ಮಣೆ ಹಾಕಲ್ಲ ಎಂಬ ನಿರೀಕ್ಷೆಯಲ್ಲಿ ಇತರೆ ಆಕಾಂಕ್ಷಿಗಳು ಇದ್ದು, ಮಾಮನಿ ಕುಟುಂಬ ಹೊರತುಪಡಿಸಿ ಬಿಜೆಪಿಯಲ್ಲಿ ನಾಲ್ವರು ಆಕಾಂಕ್ಷಿಗಳ ಮಧ್ಯೆ ತೀವ್ರ ಪೈಪೋಟಿ ಇದೆ.
ಅದರಲ್ಲಿ ಪ್ರಮುಖವಾಗಿ ಬಸವರಾಜ ಪಟ್ಟಣಶೆಟ್ಟಿ, ಸಂಜೀವ ಕುಮಾರ್ ನವಲಗುಂದ, ಈಶ್ವರ ಮೆಳ್ಳಿಗೇರಿ, ರುದ್ರಣ್ಣ ಚಂದರಗಿ ಮಧ್ಯೆ ಪೈಪೋಟಿ ನಡೆಯುತ್ತಿದೆ. ಈ ಮಧ್ಯೆ ಬಿಜೆಪಿಯಿಂದ ಅಚ್ಚರಿ ಅಭ್ಯರ್ಥಿ ಹೆಸರು ಸಹ ಘೋಷಣೆ ಆಗುವ ಸಾಧ್ಯತೆ ಇದೆ. ಬಿಜೆಪಿಯಲ್ಲಿ ಯಾರಿಗೆ ಟಿಕೆಟ್ ನೀಡಿದರೂ ಬಂಡಾಯ ಭುಗಿಲೆಳೋದು ಬಹುತೇಕ ಖಚಿತವಾಗಿದ್ದು, ಟಿಕೆಟ್ ಸಿಗದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಆಕಾಂಕ್ಷಿಗಳು ಸಿದ್ಧತೆ ನಡೆಸಿದ್ದಾರೆ.
ಇತ್ತ ಕಾಂಗ್ರೆಸ್ ಪಕ್ಷದಲ್ಲಿಯೂ ಮೂವರು ಪ್ರಬಲ ಆಕಾಂಕ್ಷಿಗಳ ಮಧ್ಯೆ ತೀವ್ರ ಪೈಪೋಟಿ ನಡೆಯುತ್ತಿದೆ. ಸೌರವ್ ಚೋಪ್ರಾ, ವಿಶ್ವಾಸ ವೈದ್ಯ, ಪಂಚನಗೌಡ ದ್ಯಾಮನಗೌಡರ ಮಧ್ಯೆ ಟಿಕೆಟ್ ಫೈಟ್ ನಡೆಯುತ್ತಿದೆ. ಮೂವರ ಪೈಕಿ ಯಾರಿಗೆ ಟಿಕೆಟ್ ಮಿಸ್ ಆದರೂ ಪಕ್ಷೇತರ ಕಣಕ್ಕಿಳಿಯಲು ತಯಾರಿ ಮಾಡಿಕೊಂಡಿದ್ದಾರೆ. ಈಗಾಗಲೇ ಬಸ್ ಯಾತ್ರೆ ಕೈಗೊಂಡಿರುವ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಸೌರವ್ ಚೋಪ್ರಾ, ಕ್ಷೇತ್ರದ ಗ್ರಾಮಗಳಲ್ಲಿ ಪ್ರಚಾರ ನಡೆಸಿ ಗ್ರಾಮ ವಾಸ್ತವ್ಯ ಹೂಡುತ್ತಿದ್ದಾರೆ. ಕಾಂಗ್ರೆಸ್, ಬಿಜೆಪಿ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಸವದತ್ತಿ ಯಲ್ಲಮ್ಮ ಕ್ಷೇತ್ರ ತಲೆಬಿಸಿ ತಂದಿದೆ.