ಬಹುಭಾಷಾ ನಟ ಶರತ್ ಬಾಬು ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದ್ದು, ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
71 ವರ್ಷ ವಯಸ್ಸಿನ ಶರತ್ ಬಾಬು ಇತ್ತೀಚೆಗೆ ಅನಾರೋಗ್ಯಕ್ಕೆ ತುತ್ತಾಗಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಇದೀಗ ಮತ್ತೆ ಅವರ ಆರೋಗ್ಯದಲ್ಲಿ ಹೆಚ್ಚಿನ ಏರುಪೇರಾದ ಹಿನ್ನಲೆಯಲ್ಲಿ ಬುಧವಾರ ಚೆನ್ನೈನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಶರತ್ ಬಾಬು ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶರತ್ ಬಾಬು ಅವರನ್ನು ನೋಡಲು ಚಿತ್ರರಂಗದ ಗಣ್ಯರು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದು, ಶರತ್ ಬಾಬು ಆರೋಗ್ಯದಲ್ಲಿ ಶೀಘ್ರದಲ್ಲಿ ಚೇತರಿಕೆ ಕಾಣಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.
ಶರತ್ ಬಾಬು ಅವರ ಆರೋಗ್ಯ ಹದಗೆಟ್ಟಿರುವ ಕುರಿತಾಗಿ ತೆಲುಗು ನಟಿ ಕಲ್ಯಾಣಿ ಪಾದಲಾ (ಕರಾಟೆ ಕಲ್ಯಾಣಿ) ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ನನ್ನ ನೆಚ್ಚಿನ ಹೀರೋ, ಬೇಗ ಗುಣಮುಖರಾಗಲಿ ಎಂದು ಅವರು ಬರೆದುಕೊಂಡಿದ್ದಾರೆ.