ನಟಿ ಹಂಸಾ ಅವರ ಬಿಗ್ ಬಾಸ್ ಜರ್ನಿ ಮುಕ್ತಾಯವಾಗಿದೆ. 28ನೇ ದಿನಕ್ಕೆ ಹಂಸಾ ಮನೆಯಿಂದ ಹೊರ ಬಿದಿದ್ದಾರೆ. ಕಳೆದ ವಾರ ಚೈತ್ರಾ ಕುಂದಾಪುರ, ಗೋಲ್ಡ್ ಸುರೇಶ್, ಉಗ್ರಂ ಮಂಜು, ಭವ್ಯಾ, ಮೋಕ್ಷಿತಾ ಪೈ, ಹಂಸಾ, ಮಾನಸಾ ಮುಂತಾದವರು ನಾಮಿನೇಟ್ ಆಗಿದ್ದರು. ಆದರೆ ಅಂತಿಮವಾಗಿ ಹಂಸಾ ಅವರು ಎಲಿಮಿನೇಟ್ ಆಗಬೇಕಾಯಿತು. ಡೇಂಜರ್ ಝೋನ್ ನ ಅಂತಿಮ ಹಂತಕ್ಕೆ ಮೋಕ್ಷಿತಾ ಮತ್ತು ಹಂಸಾ ಬಂದಿದ್ದರು. ಇಬ್ಬರಲ್ಲಿ ಯಾರು ಎಲಿಮಿನೇಟ್ ಆಗುತ್ತಾರೆ ಎಂಬುದನ್ನು ಭಾನುವಾರದ ಸಂಚಿಕೆಯಲ್ಲಿ ತೋರಿಸಿರಲಿಲ್ಲ. ಆದರೆ ಸೋಮವಾರದ (ಅ.28) ಸಂಚಿಕೆಯಲ್ಲಿ ಹಂಸಾ ಎಲಿಮಿನೇಟ್ ಆಗಿರುವುದು ಕರ್ನ್ಪಾರ್ಮ್ ಆಗಿದೆ.
ಪ್ರತಿ ವಾರ ಎಲಿಮಿನೇಟ್ ಆದವರನ್ನು ಕಿಚ್ಚ ಸುದೀಪ್ ಅವರು ವೇದಿಕೆಗೆ ಕರೆಸಿ ಮಾತನಾಡಿಸುತ್ತಾರೆ. ಆದರೆ ಇತ್ತೀಚೆಗೆ ಅವರ ತಾಯಿ ನಿಧನರಾದ್ದರಿಂದ ವೀಕೆಂಡ್ ಸಂಚಿಕೆ ನಡೆಸಿಕೊಡಲು ಸುದೀಪ್ ಅವರಿಗೆ ಸಾಧ್ಯವಾಗಿಲ್ಲ. ಹಾಗಾಗಿ ಹಂಸಾ ಅವರು ವೇದಿಕೆಯಲ್ಲಿ ಸುದೀಪ್ ಜೊತೆ ಮಾತನಾಡದೇ ಬಿಗ್ ಬಾಸ್ ಆಟವನ್ನು ಮುಗಿಸುವಂತಾಯಿತು. ಈ ಮೊದಲು ಎಲಿಮಿನೇಟ್ ಆದ ರಂಜಿತ್, ಜಗದೀಶ್ ಅವರಿಗೂ ವೇದಿಕೆಗೆ ಬರುವ ಅವಕಾಶ ಸಿಕ್ಕಿರಲಿಲ್ಲ.
ಎಲಿಮಿನೇಟ್ ಆಗುವುದಕ್ಕೂ ಮುನ್ನ ಹಂಸಾ ಅವರು ತಮ್ಮ ಇಷ್ಟು ದಿನಗಳ ಜರ್ನಿಯನ್ನು ಮೆಲುಕು ಹಾಕಿದರು. ‘ಇದು ಜೀವನಪೂರ್ತಿ ಇರುವಂತಹ ನೆನಪು. 17 ರೀತಿಯ ವ್ಯಕ್ತಿತ್ವ ಇರುವ ಜನರ ಮಧ್ಯೆ ನಾನು ಒಂದೇ ಮನೆಯಲ್ಲಿ ಇನ್ಮುಂದೆ ಎಂದಿಗೂ ಇರುವುದಿಲ್ಲ ಅನಿಸುತ್ತದೆ. ಹೊರಗಡೆಯಿಂದ ಬಿಗ್ ಬಾಸ್ ಕಾರ್ಯಕ್ರಮವನ್ನು ನೋಡುವುದಕ್ಕೂ ಒಳಗಡೆಯಿಂದ ನೋಡೋದಕ್ಕೂ ವ್ಯತ್ಯಾಸ ಇದೆ. ಇಲ್ಲಿ ನಾವು ನಿರ್ಧಾರ ತೆಗೆದುಕೊಳ್ಳುವಾಗ ಫ್ರೆಂಡ್ಸ್ ಹಾಗೂ ಫ್ಯಾಮಿಲಿಯ ಸಲಹೆ ಇರಲ್ಲ. ಹೊರಗೆ ಹೋದ ಬಳಿಕ ನಾನು ಮತ್ತಷ್ಟು ಸ್ಟ್ರಾಂಗ್ ಆಗುತ್ತೇನೆ. ನನಗೆ ತಾಳ್ಮೆ ಇದೆ ಎಂಬುದು ಇಲ್ಲಿಗೆ ಬಂದ ಬಳಿಕ ತಿಳಿಯಿತು’ ಎಂದು ಹಂಸಾ ಹೇಳಿದ್ದಾರೆ.
ಹಂಸಾ ಅವರು ಎಲಿಮಿನೇಟ್ ಆಗುವಾಗ ಅವರಿಗೆ ಒಂದು ವಿಶೇಷ ಅಧಿಕಾರ ನೀಡಲಾಯಿತು. ಮುಂದಿನ ವಾರಕ್ಕೆ ಒಬ್ಬರನ್ನು ಅವರು ನೇರವಾಗಿ ನಾಮಿನೇಟ್ ಮಾಡಬಹುದು ಎಂದು ಬಿಗ್ ಬಾಸ್ ಹೇಳಿದಾಗ ಹಂಸಾ ಅವರು ಹನುಮಂತನನ್ನು ನಾಮಿನೇಟ್ ಮಾಡಿದರು. ಅದಕ್ಕೆ ಅವರು ಕಾರಣವನ್ನೂ ನೀಡಿದರು. ‘ಹನುಮಂತ ಅವರು ಈ ಮನೆಗೆ ಬಂದು 1 ವಾರ ಆಗಿದೆ. ಧನರಾಜ್ ಒಬ್ಬರನ್ನು ಬಿಟ್ಟು ಬೇರೆ ಯಾರ ಜತೆಗೂ ಹನುಮಂತ ಬೆರೆತಿಲ್ಲ. ಸಿಂಗಿಂಗ್ ಅವರ ಪ್ಲಸ್ ಪಾಯಿಂಟ್. ಆದ್ರೆ ನಾವು ಕೇಳಿದಾಗ ಮಾತ್ರ ಅವರು ಹಾಡುತ್ತಾರೆ. ಅವರಾಗಿಯೇ ಹಾಡಿನ ಮೂಲಕ ನಮಗೆ ಮನರಂಜನೆಯನ್ನು ನೀಡಿಲ್ಲ’ ಅಂತ ಹಂಸಾ ಹೇಳಿದರು. ಹಾಗಾಗಿ ಹನುಮಂತ ಮುಂದಿನ ವಾರಕ್ಕೆ ನೇರವಾಗಿ ನಾಮಿನೇಟ್ ಆಗಿದ್ದಾರೆ.