ತಮಿಳು ಚಿತ್ರರಂಗದ ಖ್ಯಾತ ನಟ ದಳಪತಿ ವಿಜಯ್ ಇದೀಗ ರಾಜಕೀಯ ಇನ್ನಿಂಗ್ಸ್ ಶುರು ಮಾಡಿದ್ದಾರೆ. 2026ರಲ್ಲಿ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಬೇಕೆಂಬ ಗುರಿ ಹೊಂದಿರುವ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ಪಕ್ಷದ ವಿರುದ್ಧ ಡಿಎಂಕೆ ಹಾಗೂ ಎಐಡಿಎಂಕೆ ನಾಯಕರು ಮುಗಿಬಿದ್ದಿದ್ದಾರೆ. ವಿಜಯ್ ನಾಯಕತ್ವದ ಟಿವಿಕೆ ಪಕ್ಷವು ಬಿಜೆಪಿಯ ʻಸಿʼಟೀಂ ಎಂದು ಡಿಎಂಕೆ ಕರೆದರೆ, ಎಐಡಿಎಂಕೆ ಹೊಸ ಬಾಟಲಿಯಲ್ಲಿ ಹಳೆಯ ವೈನ್ ಮಿಕ್ಸ್ ಮಾಡಿದಂತಿದೆ ಎಂದು ಟೀಕಿಸಿದ್ದಾರೆ.
ತಮಿಳಿಗ ವೆಟ್ರಿಕಳಗಂ ಪಕ್ಷದ ತತ್ವ ಸಿದ್ಧಾಂತಗಳು ವಿವಿಧ ಪಕ್ಷಗಳ ಪ್ರಸ್ತುತ ರಾಜಕೀಯ ನಿಲುವುಗಳ ಕಾಕ್ಟೈಲ್ ಆಗಿದೆ ಎಂದು ಗುಡುಗಿರುವ ಎಐಎಡಿಎಂಕೆ, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಟ ಕಮಲ್ ಹಾಸನ್ ಅವರ ಮಕ್ಕಳ ನೀಡಿ ಮೈಯಮ್ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಭಾನುವಾರ ನಡೆದ ಪಕ್ಷದ ಮೊದಲ ರಾಜ್ಯಮಟ್ಟದ ಸಮಾವೇಶದಲ್ಲಿ ಮಾತನಾಡಿದ್ದ ವಿಜಯ್, ಬಿಜೆಪಿ ಹಾಗೂ ಭ್ರಷ್ಟ ಡಿಎಂಕೆಯು ನಮ್ಮ ಸೈದ್ಧಾಂತಿಕ ಮತ್ತು ರಾಜಕೀಯ ವಿರೋಧಿಗಳು ಎಂದು ಘೋಷಿಸಿದ್ದರು. ಇದೇ ವೇಳೆ ಜಾತ್ಯತೀತತೆ ಮತ್ತು ‘ಸಾಮಾಜಿಕ ನ್ಯಾಯವು ಟಿವಿಕೆಯ ಸಿದ್ಧಾಂತಗಳು ಎಂದು ಪ್ರಕಟಿಸಿದರು. ದ್ರಾವಿಡವಾದ ಹಾಗೂ ತಮಿಳು ರಾಷ್ಟ್ರೀಯತೆಯನ್ನು ತಮಿಳುನಾಡಿನ ಎರಡು ಕಣ್ಣುಗಳು ಎಂದು ಬಣ್ಣಿಸಿದ್ದರು. ಟಿವಿಕೆಯ ಸಿದ್ಧಾಂತ ಮತ್ತು ನನ್ನ ನಾಯಕತ್ವ ಒಪ್ಪಿಕೊಳ್ಳುವ ರಾಜಕೀಯ ಪಕ್ಷಗಳೊಂದಿಗೆ ಅಧಿಕಾರ ಹಂಚಿಕೊಳ್ಳಲು ಸಿದ್ಧನಿದ್ದೇನೆ ಎಂದು ದಳಪತಿ ವಿಜಯ್ ಹೇಳಿದ್ದಾರೆ.
ನಟ ವಿಜಯ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ತಮಿಳುನಾಡು ಕಾನೂನು ಸಚಿವ ರಘುಪತಿ, ವಿಜಯ್ ಅವರ ತಮಿಳಿಗ ವೆಟ್ರಿ ಕಳಗಂ ಪಕ್ಷವು. ಎ ಟೀಂ, ಬಿ ಟೀಂ ಅಲ್ಲ, ಬಿಜೆಪಿಯ ಸಿ ಟೀಂ. ದ್ರಾವಿಡ ಮಾದರಿಯ ಆಡಳಿತವನ್ನು ಜನರ ಮನಸ್ಸಿನಿಂದ ತೆಗೆದುಹಾಕಲು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದಿದ್ದಾರೆ.
ಡಿಎಂಕೆ ನಾಯಕ ಇವಿಕೆಎಸ್ ಇಳಂಗೋವನ್ ಪ್ರತಿಕ್ರಿಯಿಸಿ, ನಮ್ಮ ಪಕ್ಷದ ನೀತಿಗಳನ್ನು ವಿಜಯ್ ಕಾಪಿ ಮಾಡಿ, ಹೊಸದಾಗಿ ಘೋಷಿಸಿದ್ದಾರೆ. ಅವರು (ವಿಜಯ್) ಏನು ಹೇಳಿದ್ದಾರೋ ಅದನ್ನು ನಾವು ಈಗಾಗಲೇ ಹೇಳಿದ್ದೇವೆ ಮತ್ತು ನಾವು ಅನುಸರಿಸುತ್ತಿದ್ದೇವೆ. ನಮ್ಮ ಪಕ್ಷವು (ಡಿಎಂಕೆ) ಜನರ ಸಮಸ್ಯೆಗಳಿಗಾಗಿ ನಿರಂತರವಾಗಿ ಹೋರಾಟ ನಡೆಸಿದೆ. ಆದರೆ, ವಿಜಯ್ ಅವರ ಪಕ್ಷವು ರಾಜಕೀಯಕ್ಕೆ ಪ್ರವೇಶಿಸಿದ ತಕ್ಷಣವೇ ಅಧಿಕಾರದಲ್ಲಿರಲು ಹಾತೊರೆಯುತ್ತಿದೆ. ಇದಲ್ಲದೇ, ಟಿವಿಕೆ ನಾಯಕರು ಡಿಎಂಕೆ ನಾಯಕರಂತೆ ಜೈಲಿಗೆ ಹೋಗಿ ಜನರಿಗಾಗಿ ಹೋರಾಡುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಎಐಡಿಎಂಕೆ ವಕ್ತಾರ ಕೋವೈ ಸತ್ಯನ್ ಮಾತನಾಡಿ, ಡಿಎಂಕೆ, ಟಿವಿಕೆ ಸೇರಿದಂತೆ ಇತರ ಪಕ್ಷಗಳ ನಡುವಿನ ವ್ಯತ್ಯಾಸವೆಂದರೆ ನಾವು ಅವರಿಗಿಂತ ಹೆಚ್ಚು ಬಲಿಷ್ಠರಾಗಿದ್ದೇವೆ. ಜನರಿಂದ, ಜನರಿಗಾಗಿ, ಜನರಿಗೋಸ್ಕರವೇ ಕೆಲಸ ಮಾಡುತ್ತೇವೆ. ಹೊಸದಾಗಿ ರಾಜಕೀಯಕ್ಕೆ ಬಂದಿರುವ ವಿಜಯ್ ಅವರಿಗೆ ಅಭಿನಂದನೆಗಳು ಎಂದು ವ್ಯಂಗ್ಯವಾಡಿದ್ದಾರೆ.
ಟಿವಿಕೆ ಪಕ್ಷದ ಸಿದ್ಧಾಂತವು ಇತರೆ ಪಕ್ಷಗಳ ಸಿದ್ಧಾಂತ ಮತ್ತು ಹೊಸ ಬಾಟಲಿಯಲ್ಲಿ ಹಳೆಯ ವೈನ್ ಮಿಕ್ಸ್ ಮಾಡಿದಂತಿದೆ. ತಮಿಳುನಾಡಿನ ಎಲ್ಲಾ ರಾಜಕೀಯ ಪಕ್ಷಗಳಿಂದ ತೆಗೆದುಕೊಂಡ ಕಾನ್ಸೆಲ್ ಸಿದ್ಧಾಂತವಾಗಿದೆ. ವಿಜಯ್ ಅವರು ಜಾತಿಗಣತಿ ಸೇರಿದಂತೆ ಹಲವು ಹಲವಾರು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಇದನ್ನು ಕಾರ್ಯರೂಪಕ್ಕೆ ತರಲು ನಾವು ಅವರಿಗೆ ಸಮಯ ನೀಡುತ್ತೇವೆ ಎಂದು ಸತ್ಯನ್ ತಿಳಿಸಿದ್ದಾರೆ