ನಗುವಿನ ಸರದಾರ, ಕೋಟ್ಯಾಂತರ ಅಭಿಮಾನಿಗಳ ಆರಾಧ್ಯ ದೈವ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನರಾಗಿ ಮೂರು ವರ್ಷ ಕಳೆದಿದೆ. ಅಪ್ಪು ಇಲ್ಲದೆ ಒಂದೊಂದು ಕ್ಷಣವು ಅವರ ಅಭಿಮಾನಿಗಳ ನೋವಿನಲ್ಲೇ ಕಳೆಯುತ್ತಿದ್ದಾರೆ. ಅಪ್ಪು ಅವರ 3ನೇ ವರ್ಷದ ಅಪ್ಪು ಪುಣ್ಯ ಸ್ಮರಣೆಯಲ್ಲಿ ಹಿನ್ನೆಲೆಯಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಅಭಿಮಾನಿಗಳು ರಾಜ್ ಕುಮಾರ್ ಸಮಾಧಿಗೆ ಭೇಟಿ ನೀಡಿ ಅಪ್ಪು ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಅಪ್ಪು 3ನೇ ವರ್ಷದ ಪುಣ್ಯಸ್ಮರಣೆಯಲ್ಲಿ ಪತ್ನಿ ಅಶ್ವಿನಿ, ರಾಘವೇಂದ್ರ ರಾಜ್ಕುಮಾರ್, ವಿನಯ್ ರಾಜ್ಕುಮಾರ್, ಯುವರಾಜ್ ಕುಮಾರ್, ಅಪ್ಪು ಪುತ್ರಿಯರು ಭಾಗಿಯಾಗಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿ ಅಪ್ಪು ಸಮಾಧಿ ಬಳಿ ಇಷ್ಟದ ತಿನಿಸುಗಳನ್ನಿಟ್ಟು ಪೂಜೆ ಸಲ್ಲಿಸಿದ್ದಾರೆ. ಸಮಾಧಿಯನ್ನ ವಿಶೇಷವಾಗಿ ಹೂವುಗಳಿಂದ, ದೀಪಗಳಿಂದ ಅಲಂಕಾರ ಮಾಡಲಾಗಿದೆ. ರಾಜ್ಯದ ಮೂಲೆ ಮೂಲೆಗಳಿಂದ ಅಭಿಮಾನಿಗಳ ದಂಡು ಅಪ್ಪು ಸಮಾಧಿ ಬಳಿ ಜಮಾಯಿಸಿ ನೆಚ್ಚಿನ ನಟನಿಗೆ ನಮನ ಸಲ್ಲಿಸುತ್ತಿದ್ದಾರೆ.
ಅಪ್ಪು ಇಲ್ಲ ಎಂದು ಅವರ ಅಭಿಮಾನಿಗಳು ಸುಮ್ಮನೆ ಕುಳಿತಿಲ್ಲ. ಅವರ ಹೆಸರಿನಲ್ಲಿ ಸಾಕಷ್ಟು ಪುಣ್ಯದ ಕೆಲಸಗಳನ್ನು ವರ್ಷಪೂರ್ತಿ ಮಾಡುತ್ತಿದ್ದಾರೆ. ಇಂದು ಪುಣ್ಯ ಸ್ಮರಣೆ ವಿಶೇಷವಾಗಿ ಕಂಠೀರವ ಸ್ಟುಡಿಯೋದಲ್ಲಿ ಹಾಗೂ ರಾಜ್ಯದ ಮೂಲೆ ಮೂಲೆಗಳಲ್ಲೂ ಅನ್ನದಾನ, ರಕ್ತದಾನ ಶಿಬಿರಗಳು ನಡೆಯುತ್ತಿವೆ.