ಹಾವೇರಿ: ದೇಶಕ್ಕೆ ಕತ್ತಲ ರಾತ್ರಿಯ ರಾಜಕಾರಣವನ್ನು ಪರಿಚಯ ಮಾಡಿಕೊಟ್ಟು ಕರಗತ ಮಾಡಿರುವುದೇ ಕಾಂಗ್ರೆಸ್ಪಕ್ಷ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಶಿಗ್ಗಾಂವಿಯಲ್ಲಿ ಮಾಧ್ಯಮಗಳೊಂದಿಗೆ ರಾಜ್ಯ ಸರ್ಕಾರದ ಸಚಿವರು ಉಪಚುನಾವಣೆಯಲ್ಲಿ ಅಕ್ರಮ ತಡೆಯಲು ಬರುತ್ತಿದ್ದಾರೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿ,
ಕಾಂಗ್ರೆಸ್ನವರ ಈ ಹೇಳಿಕೆ ಹಾಸ್ಯಾಸ್ಪದವಾಗಿದೆ. ಚುನಾವಣಾ ಅಕ್ರಮ ತಡೆಯಲು ಎಲೆಕ್ಷನ್ ಕಮಿಷನ್ ಇದೆ. ಅವರು ಅವರ ಕಾರ್ಯವನ್ನು ಮಾಡುತ್ತಿದ್ದಾರೆ. ಆಡಳಿತ ಮಾಡುವ ಸಚಿವರು ಕೆಲಸ ಬಿಟ್ಟು ಅದನ್ನು ಸಚಿವರು ಮಾಡಲು ಬರುತ್ತಿರುವುದು ಹಾಸ್ಯಸ್ಪದ. ಇಡೀ ದೇಶಕ್ಕೆ ಕತ್ತಲ ರಾತ್ರಿ ರಾಜಕಾರಣ ಪರಿಚಯಿಸಿದವರೇ ಕಾಂಗ್ರೆಸ್ನವರು ಎಂದು ಹೇಳಿದರು.
ವಕ್ಫ್ ಆಸ್ತಿ ವಿಚಾರದಲ್ಲಿ ವಿರೋಧ ಪಕ್ಷದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಲಾಗುತ್ತದೆ. ಸಾಧನೆ ಸರ್ಕಾರದ್ದು ಇರುತ್ತದೆ, ವಿರೋಧ ಪಕ್ಷ ತನ್ನ ಕೆಲಸ ಮಾಡುತ್ತದೆ. ರೈತರಿಗೆ ಯಾರು ನೋಟಿಸ್ ಕೊಟ್ಟರು. 2024ರಲ್ಲಿ ರೈತರ ಪಹಣಿಯಲ್ಲಿ ದಾಖಲೆ ಕೂತಿದೆ. ಅದನ್ನು ಯಾವ ಸರ್ಕಾರ ಮಾಡಿದೆ ಎನ್ನುವುದು ಗೊತ್ತಾಗಿದೆ.
ತಾವು ಮಾಡಿದ ತಪ್ಪು ಅವ್ಯವಹಾರ ತಾವು ಮಾಡುವ ಭ್ರಷ್ಟಾಚಾರವನ್ನು ಮುಚ್ಚಿಕೊಳ್ಳಲು ಬಿಜೆಪಿ ಮೇಲೆ ಹಾಕುವ ಪ್ರವೃತ್ತಿ ಈ ಸರ್ಕಾರ ಮಾಡುತ್ತಿದೆ. ಎಲ್ಲವೂ ಸ್ಪಷ್ಟವಾಗಿದೆ. ತುಷ್ಟೀಕರಣ ರಾಜಕಾರಣ ಜನರಿಗೆ ಗೊತ್ತಿದೆ. ವಕ್ಫ್ ವಿಚಾರ ಉಪಚುನಾವಣೆಯ ಮೇಲೆ ಪರಿಣಾಮ ಬೀರುತ್ತದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ರಾಜ್ಯದ ಜನರು ಮಾತ್ರ ಈ ವಿಷಯವನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿದ್ದಾರೆ ಎಂದರು.