ಮುಂಬೈ: ಶಾಸಕ ಜೀಶನ್ ಸಿದ್ದಿಕಿ ಮತ್ತು ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಜೀವ ಬೆದರಿಕೆ ಹಾಕಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಉತ್ತರ ಪ್ರದೇಶದ ನೋಯ್ಡಾದ ತಯ್ಯಬ್ (20) ಎಂದು ಗುರುತಿಸಲಾಗಿದೆ. ಮುಂಬೈ ಪೊಲೀಸರು ಆತನನ್ನು ನಗರಕ್ಕೆ ಕರೆತರುತ್ತಿದ್ದಾರೆ.
ಅ.25ರ ಸಂಜೆ ಆರೋಪಿ ಕರೆ ಮಾಡಿ ಬೆದರಿಕೆ ಹಾಕಿದ್ದ. ಈ ಬಗ್ಗೆ ಜೀಶನ್ ಸಿದ್ದಿಕಿ ಅವರ ಕಚೇರಿಯಿಂದ ದೂರು ದಾಖಲಿಸಲಾಗಿತ್ತು.
ಅಕ್ಟೋಬರ್ 12 ರಂದು ಜೀಶನ್ ಸಿದ್ದಿಕಿಯವರ ಕಚೇರಿಯ ಹೊರಗೆ ದಸರಾ ಆಚರಣೆ ವೇಳೆ ಪಟಾಕಿ ಸಿಡಿಸುವಾಗ ಬಾಬಾ ಸಿದ್ದಿಕಿ ಅವರನ್ನು ಬಿಷ್ಣೋಯ್ ಗ್ಯಾಂಗ್ನ ಸಹಚರರು ಗುಂಡಿಕ್ಕಿ ಹತ್ಯೆಗೈದಿದ್ದರು. ಸಿದ್ದಿಕಿಯವರು ಈ ಹಿಂದೆ ಬಾಂದ್ರಾ ಕ್ಷೇತ್ರದಿಂದ ಶಾಸಕರಾಗಿದ್ದರು. ಈ ವರ್ಷದ ಆರಂಭದಲ್ಲಿ ಅವರು ಕಾಂಗ್ರೆಸ್ಗೆ ರಾಜೀನಾಮೆ ನೀಡಿ ಎನ್ಸಿಪಿ ಸೇರಿದ್ದರು.
ಅ.25 ರಂದು ಜೀಶನ್ ಸಿದ್ದಿಕಿ ಅವರು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಅಜಿತ್ ಪವಾರ್ ನೇತೃತ್ವದ ಬಣಕ್ಕೆ ಸೇರ್ಪಡೆಯಾಗಿದ್ದಾರೆ. 2019ರ ಚುನಾವಣೆಯಲ್ಲಿ ಮುಂಬೈಯ ವಂಡ್ರೆ ಪೂರ್ವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿ ಗೆದ್ದಿದ್ದ ಇವರನ್ನು ಆಗಸ್ಟ್ನಲ್ಲಿ ಪಕ್ಷದಿಂದಲೇ ಉಚ್ಚಾಟನೆ ಮಾಡಲಾಗಿತ್ತು. ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದಕ್ಕೆ ಕಾಂಗ್ರೆಸ್ ಈ ಕ್ರಮ ತೆಗೆದುಕೊಂಡಿತ್ತು.
ಬಾಬಾ ಸಿದ್ದಿಕ್ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ 15 ಮಂದಿಯನ್ನು ಬಂಧಿಸಿದ್ದಾರೆ. ಬಿಷ್ಣೋಯ್ ಗ್ಯಾಂಗ್ನ ಸದಸ್ಯನೊಬ್ಬ ಸಿದ್ದಿಕಿ ಹತ್ಯೆಯ ಆರೋಪ ಒಪ್ಪಿಕೊಂಡಿದ್ದಾನೆ. ಸಲ್ಮಾನ್ ಖಾನ್ ಅವರೊಂದಿಗಿನ ನಿಕಟ ಸಂಬಂಧದಿಂದಾಗಿ ಅವರನ್ನು ಗುರಿಯಾಗಿಸಲಾಗಿದೆ ಎಂದು ಆತ ವಿಚಾರಣೆ ವೇಳೆ ಹೇಳಿಕೊಂಡಿದ್ದಾನೆ.