ಚರ್ಚೆಯೊಂದರಲ್ಲಿ ಭಾಗಿಯಾಗಿದ್ದ ಬ್ರಿಟನ್ ಸಂಜಾತ ಅಮೆರಿಕ ಪತ್ರಕರ್ತ ಮೆಹ್ದಿ ಹಸನ್ ವಿರುದ್ಧ ವಂಚನೆ ಆರೋಪ ಮಾಡಿದ ಹಿನ್ನೆಲೆಯಲ್ಲಿ ಕನ್ಸರ್ವೇಟಿವ್ ಪಕ್ಷದ ರಾಜಕೀಯ ವಕ್ತಾರ ರ್ಯಾನ್ ಜೇಮ್ಸ್ ಗಿರ್ಡುಸ್ಕಿ ಅವರನ್ನು ಸಿಎನ್ಎನ್ ಸುದ್ದಿ ಸಂಸ್ಥೆ ಶಾಶ್ವತವಾಗಿ ನಿಷೇಧಿಸಿದೆ.
ಸೋಮವಾರ ರಾತ್ರಿ ನಡೆದ ‘NewsNight With Abby Phillip’ ಚರ್ಚಾ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಚರ್ಚಾ ಕಾರ್ಯಕ್ರಮದಲ್ಲಿ ಪತ್ರಕರ್ತ ಮೆಹ್ದಿ ಹಸನ್ ಅವರನ್ನು ಉದ್ದೇಶಿಸಿ ಗಿರ್ಡುಸ್ಕಿ, “ನಿಮ್ಮ ಹೃದಯ ಬಡಿತ ನಿಂತು ಹೋಗುವುದಿಲ್ಲ ಎಂದು ಆಶಿಸುತ್ತೇನೆ” ಎಂದು ವ್ಯಂಗ್ಯವಾಡಿದ್ದರು. ಲೆಬನಾನ್ ನಲ್ಲಿ ನಡೆಯುತ್ತಿರುವ ಸರಣಿ ಸ್ಫೋಟಗಳನ್ನು ಉಲ್ಲೇಖಿಸಿ ಅವರು ಅಂತಹ ಹೇಳಿಕೆ ನೀಡಿದ್ದರು.
ಇತ್ತೀಚೆಗೆ ನಡೆದಿದ್ದ ಚುನಾವಣಾ ಸಮಾವೇಶವೊಂದರಲ್ಲಿ ಅಲ್ಪಸಂಖ್ಯಾತತರನ್ನುದ್ದೇಶಿಸಿ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ನೀಡಿದ್ದ ಅವಹೇಳನಕಾರಿ ಹೇಳಿಕೆಯ ಸುತ್ತ ಈ ಚರ್ಚಾ ಕಾರ್ಯಕ್ರಮ ನಡೆದಿತ್ತು. ನೂತನವಾಗಿ ಝೆಟಿಯೊ ಎಂಬ ಮಾಧ್ಯಮ ಸಂಸ್ಥೆಯನ್ನು ಸ್ಥಾಪಿಸಿರುವ ಮೆಹ್ದಿ ಹಸನ್, ಸಮಾವೇಶದಲ್ಲಿ ಬಳಸಲಾಗಿದ್ದ ಅವಹೇಳನಕಾರಿ ಹೇಳಿಕೆಗಳನ್ನು ಟೀಕಿಸಿ, “ನಿಮ್ಮನ್ನು ನಾಝಿಗಳು ಎಂದು ಕರೆಯಬಾರದಿದ್ದರೆ, ಇಂತಹ ಹೇಳಿಕೆಗಳನ್ನು ನಿಲ್ಲಿಸಿ” ಎಂದು ಆಗ್ರಹಿಸಿದ್ದರು.
ಈ ಸಂದರ್ಭದಲ್ಲಿ ಗಿರ್ಡುಸ್ಕಿ ನೀಡಿದ ಪ್ರತಿಕ್ರಿಯೆಗೆ ಪ್ರತ್ಯುತ್ತರ ನೀಡಿದ ಹಸನ್, ನಾನು ಸಾಯಬೇಕು ಎಂದು ನೀವು ಬಯಸುತ್ತಿದ್ದೀರಾ? ಎಂದು ಪ್ರಶ್ನಿಸಿದ್ದರು. ಆಗ ಮಧ್ಯಪ್ರವೇಶಿಸಿದ್ದ ಕಾರ್ಯಕ್ರಮ ಪ್ರಸ್ತುತಿಕಾರ ಅಬ್ಬಿ ಫಿಲಿಪ್, ಹಸನ್ ಅವರ ಕ್ಷಮೆ ಯಾಚಿಸಿದರು ಹಾಗೂ ಚರ್ಚಾ ವೇದಿಕೆಯಿಂದ ಗಿರ್ಡುಸ್ಕಿಯನ್ನು ತೆಗೆದು ಹಾಕಲಾಗಿದೆ ಎಂದು ದೃಢಪಡಿಸಿದರು. “ಮಾತನಾಡಲು ಒಂದು ಗೆರೆಯಿದ್ದು, ಅದನ್ನು ಮೀರಲಾಗಿದೆ. ಅದು ನನಗೆ ಸ್ವೀಕಾರಾರ್ಹವಲ್ಲ” ಎಂದು ಅವರು ಹೇಳಿದರು.
ಇದರ ಬೆನ್ನಿಗೇ, ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಸಿಎನ್ಎನ್, “ನಮ್ಮ ನೇರ ಪ್ರಸಾರದಲ್ಲಿ ಜನಾಂಗೀಯ ನಿಂದನೆ ಅಥವಾ ಪಕ್ಷಪಾತಕ್ಕೆ ಅವಕಾಶವಿಲ್ಲ” ಎಂದು ಹೇಳಿದ್ದು, ಗಿರ್ಡುಸ್ಕಿಯನ್ನು ಮತ್ತೆ ಕಾರ್ಯಕ್ರಮಕ್ಕೆ ಸ್ವಾಗತಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಈ ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಪ್ರಗತಿಪರ ನಿರೂಪಕ ಹಾಗೂ ಪತ್ರಕರ್ತ ಮೆಹ್ದಿ ಹಸನ್, ಕನ್ಸರ್ವೇಟಿವ್ ವಕ್ತಾರರು ನನಗೆ ನಿಮ್ಮ ಹೃದಯ ಬಡಿತ ನಿಂತು ಹೋಗದಿರಲಿ ಎಂದು ನಾನು ಆಶಿಸುತ್ತೇನೆ ಎಂದು ಹೇಳಿದಾಗ ನಾನು ಸ್ತಬ್ಧನಾದೆ ಎಂದು ಹೇಳಿದ್ದಾರೆ.