ಬೆಂಗಳೂರು:- ರೈತರಿಗೆ ವಕ್ಫ್ ನಿಂದ ನೋಟಿಸ್ ಜಾರಿ ಆಗಿರುವ ಕುರಿತು ತಮ್ಮ ರಾಜಕೀಯ ಬೇಳೆ ಬೆಯಿಸಿಕೊಳ್ಳುತ್ತಿರುವ ಬಿಜೆಪಿ ವಿರುದ್ಧ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ಮಾಡಿದ್ದಾರೆ.
ಉಪಚುನಾವಣೆ ಮತ್ತು ಮಹಾರಾಷ್ಟ್ರ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿಯವರು ವಕ್ಫ್ ವಿವಾದ ವಿಚಾರವಾಗಿ ರಾಜಕೀಯ ಪ್ರತಿಭಟನೆ ಮಾಡುತ್ತಿದ್ದಾರೆ ಎಂದರು.
ನ.4 ರಂದು ರಾಜ್ಯಾದ್ಯಂತ ಬಿಜೆಪಿಯಿಂದ ಪ್ರತಿಭಟನೆ ಮಾಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯವರು ರಾಜಕೀಯಕೋಸ್ಕರ ಪ್ರತಿಭಟನೆಮಾಡುತ್ತಿದ್ದಾರೆ. ಅವರ ಕಾಲದಲ್ಲೂ ನೋಟಸ್ ಕೊಟ್ಟಿದ್ದರಲ್ಲ. ಅದಕ್ಕೇನು ಹೇಳುತ್ತಾರೆ? 200ಕ್ಕೂ ಹೆಚ್ಚು ನೋಟಸ್ ಕೊಟ್ಟಿದ್ದರು. ಇಂತಹ ಇಬ್ಬಂಗಿ ರಾಜಕೀಯ ಬಿಜೆಪಿ ಮಾಡಬಾರದು ಎಂದು ಕಿಡಿಕಾರಿದರು.
ಬಿಜೆಪಿ ಕಾಲದಲ್ಲಿಯೇ ನೋಟಸ್ ಕೊಡುವುದಕ್ಕೆ ಪ್ರಾರಂಭ ಆಗಿದ್ದು. ನಾನು ಈಗಾಗಲೇ ಎಲ್ಲಾ ನೋಟಿಸ್ ವಾಪಸ್ ಪಡೆಯುತ್ತೇವೆ ಎಂದು ಹೇಳಿದ್ದೇನೆ. ಯಾರನ್ನು ಒಕ್ಕಲೆಬ್ಬಿಸುವುದಿಲ್ಲ. ಇದರಲ್ಲಿ ಇನ್ನೇನು ವಿವಾದವಿಲ್ಲ. ಯಾವುದೇ ಜಿಲ್ಲೆಯಲ್ಲಿ ನೋಟಿಸ್ ಕೊಟ್ಟಿದ್ದರೂ ಅದನ್ನು ವಾಪಸ್ ಪಡೆಯುತ್ತೇವೆ. ಬೇರೆ ಬೇರೆ ಜಿಲ್ಲೆಗಳಲ್ಲಿಯೂ ಬಿಜೆಪಿ ಅವರು ನೋಟಿಸ್ ಕೊಟ್ಟಿದ್ದರು. ಯಾಕೆ ಕೊಟ್ಟಿದ್ದರು? ಈ ಇಬ್ಬಂದಿ ರಾಜಕೀಯ ಯಾಕೆ ಮಾಡುತ್ತಾರೆ? ಎಂದು ಪ್ರಶ್ನೆ ಮಾಡಿದರು.
ನ.4 ರಂದು ಪ್ರತಿಭಟನೆ ಮಾಡುತ್ತಿದ್ದಾರೆ. 3 ಉಪಚುನಾವಣೆ ಮತ್ತು ಮಹಾರಾಷ್ಟ್ರ ಚುನಾವಣೆ ಇದೆಯಲ್ಲ ಅದಕ್ಕಾಗಿ ಹೀಗೆ ಮಾಡುತ್ತಿದ್ದಾರೆ. ಇದೆಲ್ಲಾ ರಾಜಕೀಯ ಮಾಡುವ ಕಾರಣಕ್ಕಾಗಿ ಮಾಡುತ್ತಾರೆ. ಅವರು ಯಾವತ್ತು ಸತ್ಯ ಹೇಳುವುದಿಲ್ಲ. ಬರೀ ಸುಳ್ಳನ್ನೇ ಹೇಳುತ್ತಾರೆ. ವಿಷಯ ಇಲ್ಲದೇ ಇದ್ದರೂ ವಿವಾದ ಮಾಡುತ್ತಾರೆ. ಮುಡಾದಲ್ಲಿ ವಿವಾದ ಇರಲಿಲ್ಲ. ಆದರೂ ಬಿಜೆಪಿಯವರು ಅದನ್ನು ವಿವಾದವನ್ನಾಗಿ ಮಾಡಿದರು. ಅದೇ ಅವರ ಗುಣ ಎಂದು ವಾಗ್ದಾಳಿ ನಡೆಸಿದರು.