ಉಡುಪಿ: ಯಾವುದೇ ಪರಿಸ್ಥಿತಿಯಲ್ಲಿ ಪಂಚ ಗ್ಯಾರಂಟಿಗಳನ್ನು ಸ್ಥಗಿತಗೊಳಿಸುವುದಿಲ್ಲ ಎಂದು ಶಕ್ತಿ ಯೋಜನೆ ವಿಚಾರವಾಗಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು. ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ಪೂರ್ವ ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ.
ಪಂಚ ಗ್ಯಾರಂಟಿಗಳಿಗೆ ಕರ್ನಾಟಕ ಸರ್ಕಾರವೇ ಮಾದರಿ.
ಈ ಮಾದರಿಯನ್ನು ಇಡೀ ದೇಶದಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಶಕ್ತಿ ಯೋಜನೆ ಬಗ್ಗೆ ಯಾವುದೇ ಗೊಂದಲ ಬೇಡ. ರಾಜ್ಯದಲ್ಲಿ ಪಂಚ ಗ್ಯಾರಂಟಿಗಳು ನಿಲ್ಲುವುದಿಲ್ಲ. ಮುಂದಾಲೋಚನೆ ಇಟ್ಟುಕೊಂಡೆ ಪಂಚ ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇವೆ. ಮಹಿಳೆಯರ ಆರ್ಥಿಕ ಸಬಲೀಕರಣ ಮಾಡಲು ಜಾರಿಗೆ ತಂದಿದ್ದೇವೆ. ದೇಶದಲ್ಲೇ ಪ್ರಥಮ ಬಾರಿಗೆ ಕರ್ನಾಟಕದಲ್ಲಿ ಈ ಯೋಜನೆಗಳು ಜಾರಿಯಾಗಿವೆ ಎಂದು ಸ್ಪಷ್ಟನೆ ನೀಡಿದರು.
ಡಿಕೆ ಶಿವಕುಮಾರ್ ಅವರನ್ನು ನಾವು ಇವತ್ತು ನೋಡುತ್ತಿಲ್ಲ. ಡಿಕೆಶಿ ಅಧ್ಯಕ್ಷರಾದಾಗ ಕೋವಿಡ್ ಇತ್ತು. ಆಗ ರಾಜ್ಯದಲ್ಲಿ ಬಹಳಷ್ಟು ಮಹಿಳೆಯರು ಬೆಲೆ ಏರಿಕೆ ಕುರಿತಾಗಿ ದೂರಿದ್ದರು. ಈ ಬಗ್ಗೆ ಏನಾದರೂ ಮಾಡಬೇಕು ಎಂದು ಯೋಚಿಸಿ, ಬೆಲೆ ಏರಿಕೆ ಕಡಿಮೆ ಮಾಡಲು ಈ ಯೋಜನೆಗಳನ್ನು ತಂದರು.
ಇದರ ಬಗ್ಗೆ ವಿಚಾರ ಮಾಡಿ, ಮಹಿಳೆಯರ ಜೊತೆ ಚರ್ಚೆ, ಸಂವಾದ ಮಾಡಿ ಗ್ಯಾರಂಟಿ ಯೋಜನೆಗಳನ್ನು ಜಾರಿ ತಂದವರು ಡಿಕೆಶಿವಯರೇ. ಅವರ ಉದ್ದೇಶ ಸ್ಪಷ್ಟವಾಗಿದೆ. ಈ ಯೋಜನೆಯಿಂದ ಲಕ್ಷಾಂತರ ಮಹಿಳೆಯರಿಗೆ ಅನುಕೂಲವಾಗಿದೆ. ಯಾವುದೇ ಪರಿಸ್ಥಿತಿಯಲ್ಲಿ ಪಂಚ ಗ್ಯಾರಂಟಿಗಳನ್ನು ಸ್ಥಗಿತಗೊಳಿಸುವುದಿಲ್ಲ ಎಂದು ಹೇಳಿದರು.