ಖಾನ್ ಯೂನಿಸ್ ನಲ್ಲಿ ಇಸ್ರೇಲ್ ಸೇನೆ ನಡೆಸಿದ ದಾಳಿಯಲ್ಲಿ ಹಮಾಸ್ನ ಹಿರಿಯ ಅಧಿಕಾರಿ ಇಝ್-ಅಲ್ ದೀನ್ ಕಸಬ್ರನ್ನು ಹತ್ಯೆ ಮಾಡಿರುವುದಾಗಿ ಇಸ್ರೇಲ್ ಸೇನೆ ತಿಳಿಸಿದೆ.
ಮೃತ ಅಲ್ ದೀನ್ ಕಸಬ್ ಗಾಜಾ ಪಟ್ಟಿಯಲ್ಲಿರುವ ಇತರ ಸಂಘಟನೆಗಳೊಂದಿಗೆ ಸಮನ್ವಯ ವಹಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದರು. ಜೊತೆಗೆ ಹಮಾಸ್ ನ ಉನ್ನತ ಶ್ರೇಣಿಯ ನಾಯಕರಾಗಿದ್ದರು ಎಂದು ಇಸ್ರೇಲ್ ಹೇಳಿದೆ.
ಕಸಬ್ ಸಾವನ್ನು ಹಮಾಸ್ ಬಂಡುಕೋರ ಸಂಘಟನೆಯೂ ಖಚಿತ ಪಡಿಸಿದ್ದು, ‘ಅವರ ಸಾವಿಗೆ ದುಃಖ ವ್ಯಕ್ತ ಪಡಿಸುತ್ತೇವೆ’ ಎಂದು ಹೇಳಿದೆ. ಅಲ್ಲದೆ ಮತ್ತೊಬ್ಬ ಅಧಿಕಾರಿ ಐಮನ್ ಆಯೆಷ್ ಕೂಡ ಇಸ್ರೇಲ್ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ಹಮಾಸ್ ಪ್ರಕಟಣೆಯಲ್ಲಿ ತಿಳಿಸಿದೆ.
ಕಸಬ್, ಗಾಜಾದಲ್ಲಿ ಸ್ಥಳೀಯ ಗುಂಪಿನ ಅಧಿಕಾರಿಯಾಗಿದ್ದರೂ, ಅದರ ನಿರ್ಧಾರ ತೆಗೆದುಕೊಳ್ಳುವ ರಾಜಕೀಯ ಕಚೇರಿಯ ಸದಸ್ಯರಲ್ಲ ಎಂದು ಹಮಾಸ್ ಮೂಲಗಳು ತಿಳಿಸಿವೆ.