ಸ್ಯಾಂಡಲ್ ವುಡ್ ಖ್ಯಾತ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕ್ರಿಯೇಟಿವ್ ಡೈರೆಕ್ಟರ್ ತಮ್ಮ ಜೀವನವನ್ನು ಈ ರೀತಿ ಕೊನೆಯಾಗಿಸಿಕೊಂಡಿದ್ದು ಕಂಡ ಪ್ರತಿಯೊಬ್ಬರು ಬೆಚ್ಚಿ ಬಿದ್ದಿದ್ದಾರೆ. ತಮ್ಮದೇ ಶೈಲಿಯ ಬರವಣಿಗೆ, ವಿಭಿನ್ನ ಆಲೋಚನೆಗಳಿಂದ ಸಿನಿಪ್ರಿಯರಿಗೆ ಇಷ್ಟವಾಗುತ್ತಿದ್ದ ಗುರುಪ್ರಸಾದ್ ಚಿತ್ರರಂಗಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದರು.
ಅವರು ಕ್ರಿಯಾಶೀಲತೆಗೆ ‘ಮಠ’ ಹಾಗೂ ‘ಎದ್ದೇಳು ಮಂಜುನಾಥ’ ಸಿನಿಮಾಗಳೇ ಸಾಕ್ಷಿ. ತನ್ನ ಕ್ರಿಯಾಶೀಲತೆಯನ್ನು ಗುರುಪ್ರಸಾದ್ ಸರಿಯಾಗಿ ಬಳಸಿಕೊಳ್ಳುವಲ್ಲಿ ವಿಫಲರಾದರು ಅನ್ನೋದು ಇಂದು ಪ್ರತಿಯೊಬ್ಬರು ಹೇಳುತ್ತಿರುವ ಮಾತು. ತನ್ನ ಪ್ರತಿಭೆಯನ್ನು ಬಳಸಿಕೊಂಡು ಒಳ್ಳೊಳ್ಳೆ ಸಿನಿಮಾಗಳನ್ನು ನೀಡಬಹುದಾಗಿದ್ದ ಗುರುಪ್ರಸಾದ್ ಅವರಿಗೆ ಅವರ ಜೀವನ ಶೈಲಿಯೇ ಮುಳುವಾಗಿತ್ತು. ಸಾಲ, ಖಿನ್ನತೆ, ಸಾಂಸಾರಿಕ ಜೀವನ ಇವೆಲ್ಲವೂ ಅವರನ್ನು ಬಲಿ ಪಡೆದು ಬಿಟ್ಟಿದೆ.
ಗುರುಪ್ರಸಾದ್ ಸಾವಿನ ಬಳಿಕ ಅವರ ಕೊನೆಯ ಕ್ಷಣಗಳು ಕೂಡ ಅಷ್ಟೇ ಕಠೋರವಾಗಿತ್ತು. ನಟ ದುನಿಯಾ ವಿಜಯ್ ಇರದೇ ಹೋಗಿದ್ದರೆ ಅಂತ್ಯಸಂಸ್ಕಾರಕ್ಕೂ ಪರದಾಡಬೇಕಾಗಿತ್ತು. ಗುರುಪ್ರಸಾದ್ ಹಾಗೂ ದುನಿಯಾ ವಿಜಯ್ ಒಟ್ಟಿಗೆ ಒಂದೇ ಒಂದು ಸಿನಿಮಾ ಮಾಡಿಲ್ಲ. ಇಬ್ಬರ ನಡುವೆ ಹೆಚ್ಚಿನ ಬಾಂದವ್ಯವೂ ಇರಲಿಲ್ಲ. ಆದರೆ, ಗುರುಪ್ರಸಾದ್ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ನೆರವಿಗೆ ಬಂದಿದ್ದು ಇದೇ ದುನಿಯಾ ವಿಜಯ್. ಮನೆಯಿಂದ ವಿಕ್ಟೋರಿಯಾಗೆ ಮೃತದೇಹವನ್ನು ಸಾಗಿಸುವ ವೇಳೆ ನಾಲ್ಕು ಬಾರಿ ಆಂಬ್ಯುಲೆನ್ಸ್ ಕೆಟ್ಟ ನಿಂತಿತ್ತು. ಇಲ್ಲಿಂದ ಒಂದೊಂದು ಸವಾಲು ಎದುರಾಗಿತ್ತು.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಇಬ್ಬರು ಪತ್ನಿಯರ ಮಧ್ಯೆ ಗೊಂದಲವಿತ್ತು. ಮೊದಲ ಪತ್ನಿ ಆರತಿಯವರಿಗೆ ಬ್ರಾಹ್ಮಣ ಸಂಪ್ರದಾಯಂತೆ ಅಂತ್ಯ ಸಂಸ್ಕಾರ ಆಗಬೇಕು ಅಂತಿತ್ತು. ಎರಡನೇ ಪತ್ನಿ ಸುಮಿತ್ರಾ ಅವರಿಗೆ ಗೌಡರ ಸಂಪ್ರದಾಯದಂತೆ ವಿಧಿ ವಿಧಾನಗಳು ನಡೆಯಬೇಕು ಅಂತಿತ್ತು. ಈ ಗೊಂದಲ ಬೇರೆ ವಾತಾವರಣವನ್ನೇ ಸೃಷ್ಟಿಸಬಹುದಿತ್ತು. ಆ ವೇಳೆ ದುನಿಯಾ ವಿಜಯ್ ಮುಂದೆ ಬಂದಿದ್ದರು. ಇಬ್ಬರು ಪತ್ನಿಯರಿಗೆ ಪರಿಸ್ಥಿತಿಯನ್ನು ಅರ್ಥ ಮಾಡಿಸಿ ಅಂತ್ಯ ಸಂಸ್ಕಾರಕ್ಕೆ ಒಪ್ಪಿಸಿದ್ದರು.
ಮರಣೋತ್ತರ ಪರೀಕ್ಷೆ ಬಳಿಕ ಎರಡನೇ ಪತ್ನಿ ಸುಮಿತ್ರಾ ಪತಿ ಗುರುಪ್ರಸಾದ್ ಮುಖ ನೋಡಬೇಕು ಅಂತ ಹಠ ಹಿಡಿದಿದ್ದರು. ಆದರೆ ಅದಾಗಲೇ ದೇಹ ಕೊಳೆತು ವಾಸನೆ ಬರುತ್ತಿತ್ತು. ಹೀಗಾಗಿ ಮುಖ ನೋಡುವಂತಹ ಸ್ಥಿತಿಯಲ್ಲಿ ಇರಲಿಲ್ಲ. ಹೀಗಾಗಿ ಮರಣೋತ್ತರ ಪರೀಕ್ಷೆ ಮೂಲಕ ಅವರ ಮೃತದೇಹವನ್ನು ಸಂಪೂರ್ಣವಾಗಿ ಮುಚ್ಚಲಾಗಿತ್ತು. ಹಾಗೇ ಮೃತದೇಹವನ್ನು ಮನೆಗೆ ತೆಗೆದುಕೊಂಡು ಹೋಗುವುದಾಗಿ ಸುಮಿತ್ರಾ ಹಠ ಹಿಡಿದಿದ್ದರು. ಆ ವೇಳೆ ಅವರ ಭಾವನೆಗಳಿಗೆ ನೋವಾಗದಂತೆ ದುನಿಯಾ ವಿಜಯ್ ಪರಿಸ್ಥಿತಿಯನ್ನು ಅರ್ಥ ಮಾಡಿಸಿದ್ದರು.
ಗುರುಪ್ರಸಾದ್ ಮರಣೋತ್ತರ ಪರೀಕ್ಷೆ ಮುಗಿಯುವ ವೇಳೆಗೆ ಸಂಜೆಯಾಗಿತ್ತು. ವಿಲ್ಸನ್ ಗಾರ್ಡನ್ ಚಿತಾಗಾರ 7 ಗಂಟೆಗೆಲ್ಲಾ ಬಾಗಿಲು ಹಾಕಿತ್ತು. ಈ ವೇಳೆ ಆನ್ಲೈನ್ನಲ್ಲಿ ಬುಕ್ ಮಾಡಿದರೆ, ತಡವಾಗುತ್ತೆ ಎಂದು ತಮ್ಮ ಹುಡುಗರನ್ನು ಕಳಿಸಿ ವ್ಯವಸ್ಥೆ ಮಾಡಿಸಿದ್ದರು. ಈ ವೇಳೆ ಮತ್ತೊಂದು ಸಮಸ್ಯೆ ಎದುರಾಗಿತ್ತು. ಪೊಲೀಸರ ಸಹಿ ಇಲ್ಲದೆ ಗುರುಪ್ರಸಾದ್ ಮೃಹದೇಹವನ್ನು ತೆಗೆದುಕೊಳ್ಳುವುದಿಲ್ಲ ಎಂದು ಚಿತಾಗಾರದ ಸಿಬ್ಬಂದಿ ಹೇಳಿದ್ದರು. ಆ ವೇಳೆ ದುನಿಯಾ ವಿಜಯ್ ಅವರೇ ಮನವಿ ಮಾಡಿಕೊಂಡು ಮೃತದೇಹ ಕೊಳೆತಿದೆ. ಇಟ್ಟುಕೊಳ್ಳುವುದಕ್ಕೆ ಆಗುವುದಿಲ್ಲ. ನಾಳೆ ತಾನೇ ಸಹಿ ಹಾಕಿಸಿ ತಂದು ಕೊಡುವುದಾಗಿ ಒಪ್ಪಿಸಿ ಅಂತ್ಯಕ್ರಿಯೆ ನಡೆಯುವಂತೆ ನೋಡಿಕೊಂಡಿದ್ದರು.
ಕೊನೆಯ ಕ್ಷಣದಲ್ಲಿ ಅಣ್ಣ ಹಾಗೂ ಸುಮಿತ್ರಾ ಅವರ ಸಹೋದರನ್ನು ಕೂರಿಸಿ ಅಂತ್ಯಕ್ರಿಯೆ ಮಾಡಿಸಿದ್ದರು. ಜೊತೆಗೆ ಮೊದಲ ಪತ್ನಿಯ ಪುತ್ರಿ ಹಾಗೂ ಎರಡನೇ ಪತ್ನಿಯಿಂದ ದೇಹವನ್ನು ಮುಟ್ಟಿಸಿ ಚಿತೆಗೆ ಮೃತದೇಹವನ್ನು ತಳ್ಳುವವರೆಗೂ ಜೊತೆಯಲ್ಲಿ ನಿಂತಿದ್ದರು. ದುನಿಯಾ ವಿಜಯ್ ಇರದೇ ಹೋಗಿದ್ದರೆ ಇದೆಲ್ಲವೂ ಸಾಧ್ಯವಾಗುತ್ತಿರಲಿಲ್ಲ ಎಂದು ಗುರುಪ್ರಸಾದ್ ಆಪ್ತರು ಹೇಳಿಕೊಂಡಿದ್ದಾರೆ.