ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನ ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ. ಜನ ಒಂದು ಹೊತ್ತಿನ ಕೂಳಿಗೂ ಪರದಾಡುತ್ತಿದ್ದು, ದೇಶ ದಿವಾಳಿಯಾಗುವ ಹಂತದಲ್ಲಿದೆ. ಆದರೆ ಈತ ಮಾತ್ರ ಅಂದು ಪಾತ್ರೆತೊಳೆಯುತ್ತಿದ್ದವ ಇಂದು ಪಾಕಿಸ್ತಾನದ ಅತ್ಯಂತ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದಾರೆ.
ಅಂದು ಹೋಟೆಲ್ ಒಂದರಲ್ಲಿ ಪಾತ್ರೆ ತೊಳೆಯುತ್ತಿದ್ದ ಶಾಹಿದ್ ಖಾನ್ ಇಂದು ಪಾಕ್ ನ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. 1950ರ ಜುಲೈ18ರಂದು ಜನಿಸಿರುವ ಶಾಹಿದ್ ಖಾನ್ ಅವರು ಪಾಕಿಸ್ತಾನ ಮೂಲದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ.
ಫ್ಲೆಕ್ಸ್-ಎನ್-ಗೇಟ್ ಮಾಲೀಕರಾದ ಶಾಹಿದ್ ಖಾನ್ ಕೋಟ್ಯಾಧಿಪತಿ ಉದ್ಯಮಿಯಾಗಿದ್ದಾರೆ. ಜತೆಗೆ ಅವರು ಕ್ರೀಡಾ ಉದ್ಯಮಿಯೂ ಹೌದು. ಅವರು ಫ್ಲೆಕ್ಸ್-ಎನ್-ಗೇಟ್ ವಾಹನಗಳ ಬಿಡಿಭಾಗ ಪೂರೈಕೆ ಮಾಡುವ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಶಾಹಿದ್ ಖಾನ್ ಅವರು ನ್ಯಾಷನಲ್ ಫುಟ್ಬಾಲ್ ಲೀಗ್ ನ ಜಾಕ್ಸನ್ವೆಲ್ಲೆ ಜಾಗ್ವಾರ್ಸ್ ಹಾಗೂ ಫುಲ್ಹಾಮ್ ಎಫ್ಸಿ ಪ್ರೀಮಿಯರ್ ಲೀಗ್ನ ಮಾಲೀಕರು ಕೂಡ ಆಗಿದ್ದಾರೆ. ಅಲ್ಲದೆ ಶಾಹಿದ್ ಅವರು ತಮ್ಮ ಪುತ್ರ ಟೋನಿ ಖಾನ್ ಜತೆಗೆ ಅಮೆರಿಕನ್ ಕುಸ್ತಿ ಪ್ರಮೋಷನ್ ಆಲ್ ಎಲೈಟ್ ವ್ರೆಸ್ಲಿಂಗ್ನ ಸಹ ಮಾಲೀಕರೂ ಹೌದು.
ಶಾಹಿದ್ ಖಾನ್ ಅವರು ಪಾಕಿಸ್ತಾನದ ಲಾಹೋರ್ನಲ್ಲಿ ಹುಟ್ಟಿದ್ದು, ಅವರ ಕುಟುಂಬವು ನಿರ್ಮಾಣ ಉದ್ಯಮದಲ್ಲಿ ತೊಡಗಿಸಿಕೊಂಡಿದೆ. ಶಾಹಿದ್ ಹುಟ್ಟಿದಾಗ ಅವರ ಕುಟುಂಬವು ಮಧ್ಯಮ ವರ್ಗದ ಕುಟುಂಬವಾಗಿತ್ತು. ಅವರ ತಾಯಿ ಗಣಿತ ಅಧ್ಯಾಪಕಿಯಾಗಿದ್ದು, ತಂದೆ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದರು. 1967ರಲ್ಲಿ ತನಗೆ 16 ವರ್ಷ ಇರುವಾಗ ಶಾಹಿದ್ ಕಲಿಯುವ ಆಸಕ್ತಿಯಿಂದ ಮನೆಯನ್ನು ತೊರೆದು ಅಮೆರಿಕ ದೇಶಕ್ಕೆ ತೆರಳಿದ್ದರು. ಅಲ್ಲಿ ಅವರು ಇಲಿನಾಯ್ಸ್ ಅರ್ಬಾನಾ-ಚಾಂಪೇನ್ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣಕ್ಕಾಗಿ ಸೇರಿಕೊಂಡರು. ಆದರೆ ಹಣಕಾಸಿನ ತೊಂದರೆಯಿದ್ದ ಕಾರಣ ಮೊದಲ ಸೆಮಿಸ್ಟರ್ನಲ್ಲಿರುವಾಗಲೇ ಪಾತ್ರೆ ತೊಳೆಯುವ ಕೆಲಸಕ್ಕೆ ಸೇರಿಕೊಂಡಿದ್ದರು.
ತಮ್ಮ ಮೊದಲ ಉದ್ಯೋಗಕ್ಕೆ ಪಡೆಯುತ್ತಿದ್ದ ವೇತನ ಕೇವಲ 1.20 ಡಾಲರ್ (ಗಂಟೆಗೆ). ಆದರೆ ಬದುಕಿನಲ್ಲಿ ಪಟ್ಟ ನಾನಾ ರೀತಿಯ ಕಷ್ಟಗಳನ್ನು ಸವಾಲಾಗಿ ಎದುರಿಸಿದ ಪರಿಣಾಮ, 2021ರ ಫೋರ್ಬ್ಸ್ನಲ್ಲಿ ಅಮೆರಿಕದ 400 ಮಂದಿ ಶ್ರೀಮಂತರ ಪಟ್ಟಿಯಲ್ಲಿ 98ನೇ ಶ್ರೀಮಂತ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಶಾಹಿದ್ ಶಿಕ್ಷಣದ ಜತೆಗೆ ಅಮೆರಿಕದ ಆಟೊಮೊಟೀವ್ ಬಿಡಿಭಾಗಗಳ ವಿತರಕ ಸಂಸ್ಥೆ ಫೆಲೆಕ್ಸ್ ಎನ್-ಗೇಟ್ನಲ್ಲಿ ಎಂಜಿನಿಯರ್ ಆಗಿಯೂ ಕೆಲಸ ಮಾಡಿದ್ದಾರೆ. 1978ರಲ್ಲಿ ಅವರು ಆ ಕಂಪೆನಿಯನ್ನು ಬಿಟ್ಟು ಅದೇ ಮಾದರಿಯ ಕಾರುಗಳ ಬಂಪರ್ ನಿರ್ಮಾಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು. ನಂತರ ಅಂದರೆ 1980ರಲ್ಲಿ ಫ್ಲೆಕ್ಸ್ ಎನ್-ಗೇಟ್ ಕಂಪೆನಿಯು ನಷ್ಟ ಹೊಂದಿದ್ದ ವೇಳೆ ಅದನ್ನೇ ಖರೀದಿ ಮಾಡಿದರು.
ಪ್ರಸ್ತುತ ಫ್ಲೆಕ್ಸ್ ಎನ್-ಗೇಟ್ ಅಮೆರಿಕದ ಅತಿದೊಡ್ಡ ಆಟೋಮೊಬೈಲ್ ಬಿಡಿ ಭಾಗಗಳ ಪೂರೈಕೆ ಕಂಪೆನಿಯಾಗಿ ಬೆಳೆದಿದೆ. ಜತೆಗೆ ಅಮೆರಿಕ, ಚೀನಾ, ಅರ್ಜೆಂಟೀನಾ, ಸ್ಪೇನ್, ಫ್ರಾನ್ಸ್, ಜರ್ಮನಿ, ಮೆಕ್ಸಿಕೋ ಮತ್ತು ಕೆನಡಾ ಸೇರಿದಂತೆ ವಿಶ್ವದ ಹಲವೆಡೆ 69 ಉತ್ಪಾದನಾ ಘಟಕಗಳನ್ನು ಶಾಹಿದ್ ಖಾನ್ ಹೊಂದಿದ್ದು, 25,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದ್ದಾರೆ.