ರಾಯಚೂರು: ಬಿಜೆಪಿಯವರು ತಮ್ಮ ಆಂತರಿಕ ಸಮಸ್ಯೆಗಳನ್ನು ಮುಚ್ಚಿಕೊಳ್ಳಲು ವಕ್ಫ್ ವಿಚಾರದಲ್ಲಿ ಹೋರಾಟ ಮಾಡುತ್ತಿದ್ದಾರೆ. ಸರ್ಕಾರದ ವಿರುದ್ಧ ಆರೋಪ ಮಾಡಲು ಬಿಜೆಪಿಯವರಿಗೆ ಬೇರೆ ಯಾವುದೇ ವಿಷಯಗಳಿಲ್ಲ ಎಂದು ಸಣ್ಣನೀರಾವರಿ ಸಚಿವ ಎನ್.ಎಸ್.ಬೋಸರಾಜು ಹೇಳಿದ್ದಾರೆ. ರಾಯಚೂರಿನಲ್ಲಿ ಮಾತನಾಡಿದ ಅವರು, ಬಿಜೆಪಿಯವರ ಆಂತರಿಕ ಸಮಸ್ಯೆಗಳನ್ನು ಎಲ್ಲರಿಗೂ ಗೊತ್ತಿದೆ.
ವಿಜಯೇಂದ್ರ ಗ್ರೂಪ್, ಅವರನ್ನು ಸ್ಥಾನದಿಂದ ತೆಗೆಯಬೇಕು ಎನ್ನುವ ಇನ್ನೊಂದು ಗುಂಪು ಇದೆ. ಅದನ್ನು ಮುಚ್ಚಿಕೊಳ್ಳಲು ಕಾಂಗ್ರೆಸ್ ಸರ್ಕಾರ, ಮುಖಂಡರ ಮೇಲೆ ಗೂಬೆ ಕೂಡಿಸುವ ಕೆಲಸ ಮಾಡುತ್ತಿದ್ದಾರೆ. ತಮ್ಮ ಆಂತರಿಕ ಸಮಸ್ಯೆಗಳನ್ನು ಇಟ್ಟುಕೊಂಡು ಒಬ್ಬರಿಗೊಬ್ಬರು ಸವಾಲ್ ಹಾಕಿಕೊಳ್ಳುತ್ತಿದ್ದಾರೆ. ವಿಜಯೇಂದ್ರ ಗ್ರೂಪ್, ಬಸನಗೌಡ ಯತ್ನಾಳ, ರಮೇಶ್ ಜಾರಕಿಹೊಳಿ ಗ್ರೂಪ್ ಇದೆ ಎಂದು ಎಲ್ಲರಿಗೂ ಗೊತ್ತಿದೆ ಎಂದರು.
ರಾಜ್ಯದಲ್ಲಿ ನಮ್ಮ ಗ್ಯಾರಂಟಿಗಳು, ಅಭಿವೃದ್ಧಿ ಕಾರ್ಯಗಳು ವ್ಯವಸ್ಥಿತವಾಗಿ ನಡೆಯುತ್ತಿವೆ. ಆದರೆ ವಕ್ಫ್ ನೋಟಿಸ್ ವಿಚಾರಕ್ಕೆ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿ, ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಬಸವರಾಜ್ ಬೊಮ್ಮಾಯಿ ಸಿಎಂ ಇದ್ದಾಗಲೇ ನೋಟಿಸ್ ಕೊಟ್ಟಿದ್ದಾರೆ. ಆ ಕುರಿತು ನಮ್ಮ ಬಳಿ ದಾಖಲೆಗಳಿವೆ. ಮೈನಾರಿಟಿಯವರ ಮೀಟಿಂಗ್ಗೆ ಹೋಗಿ ಅವರೇ ತಕ್ಷಣ ನೋಟಿಸ್ ಕೊಡುತ್ತೇನೆ, ಕೂಡಲೇ ಆದೇಶ ಹೊರಡಿಸುತ್ತೇನೆ, ವಕ್ಫ್ ಬೋರ್ಡ್ ಆಸ್ತಿ ಬಿಡುಗಡೆ ಮಾಡದಿದ್ದರೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ. ಈ ಕುರಿತು ನಮ್ಮ ಬಳಿ ದಾಖಲೆಯಿದೆ. ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಹರಿದಾಡುತ್ತಿದೆ ಎಂದು ಹೇಳಿದರು.