ಮಂಗಳೂರು: ದೇಶದ ಮೊದಲ ಜಲ ಮೆಟ್ರೋ ಸೇವೆ ಕೇರಳದಲ್ಲಿ ಕಳೆದ ವರ್ಷ ಆರಂಭವಾಗಿತ್ತು. ಪ್ರಧಾನಿ ನರೇಂದ್ರ ಮೋದಿ ವಾಟರ್ ಮೆಟ್ರೋ ಯೋಜನೆಯನ್ನು ಏಪ್ರಿಲ್ 25ರಂದು ಉದ್ಘಾಟಿಸಿದ್ದರು. ಅದರಂತೆ ಕೇರಳದ ಕೊಚ್ಚಿ ಮಾದರಿಯಲ್ಲಿ ಕರ್ನಾಟಕದ ಕರಾವಳಿ ನಗರ ಮಂಗಳೂರಿನಲ್ಲೂ ವಾಟರ್ ಮೆಟ್ರೋ ಸೇವೆ ಸಿಗುವ ಸಾಧ್ಯತೆಯಿದೆ.
ಕರ್ನಾಟಕ ಮಾರಿಟೈಮ್ ಬೋರ್ಡ್ ಮಂಗಳೂರು ವಾಟರ್ ಮೆಟ್ರೋ ಯೋಜನೆಗೆ ಸಮಗ್ರವಾದ ಯೋಜನಾ ವರದಿಯನ್ನು ತಯಾರಿಸಲು ನಿರ್ಧರಿಸಿದ್ದು ಟೆಂಡರ್ ಆಹ್ವಾನಿಸಿದೆ.
ಈ ಸಾರಿಗೆ ಜಾಲ ನೇತ್ರಾವತಿ ಮತ್ತು ಗುರುಪುರ ನದಿಗಳ ಎರಡೂ ದಡಗಳಲ್ಲಿ ಬಜಾಲ್ನಿಂದ ಮರವೂರುವರೆಗೆ ಸಂಪರ್ಕ ಕಲ್ಪಿಸಲಿದೆ. ಹಂತ ಹಂತವಾಗಿ ಯೋಜನೆ ಅನುಷ್ಠಾನಗೊಳ್ಳಲಿದೆ. ಆರಂಭದಲ್ಲಿ ನೇತ್ರಾವತಿ-ಗುರುಪುರ ನದಿ ಹಿನ್ನೀರಿನ ಉದ್ದಕ್ಕೂ ಸುಮಾರು 30 ಕಿಲೋಮೀಟರ್ ದೂರದವರೆಗೆ ಬೋಟ್ ಸಂಚರಿಸಲಿದೆ. ಈ ಮಾರ್ಗದಲ್ಲಿ ಒಟ್ಟು 17 ನಿಲ್ದಾಣಗಳಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ.
ಕೊಚ್ಚಿಯ ನಂತರ ಮಂಗಳೂರು ವಾಟರ್ ಮೆಟ್ರೋ ಯೋಜನೆ ಎರಡನೇ ಅತಿದೊಡ್ಡ ಜಲ ಸಾರಿಗೆ ವ್ಯವಸ್ಥೆಯಾಗಿದೆ. ಸಂಪರ್ಕವನ್ನು ಹೆಚ್ಚಿಸುವುದು ಮತ್ತು ಸಂಪರ್ಕಿತ ಪ್ರದೇಶಗಳಲ್ಲಿ ಸಮಗ್ರ ಅಭಿವೃದ್ಧಿಯನ್ನು ರಚಿಸುವುದು ಇದರ ಉದ್ದೇಶವಾಗಿದೆ. ಈ ಯೋಜನೆಯಿಂದ ಜೀವನೋಪಾಯದ ಅವಕಾಶಗಳು ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸುತ್ತದೆ ಎಂದು ಕೆಎಂಬಿ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.
2024-2025ರ ಬಜೆಟ್ ಮಂಡನೆಯ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮಂಗಳೂರಿನ ಗುರುಪುರ ಮತ್ತು ನೇತ್ರಾವತಿ ನದಿಗಳಲ್ಲಿ ವಾಟರ್ ಮೆಟ್ರೋ ಸೇವೆಯನ್ನು ಆರಂಭಿಸಲು ಕಾರ್ಯಸಾಧ್ಯತಾ ವರದಿಯನ್ನು ಸಿದ್ಧಪಡಿಸಲಾಗುವುದು ಎಂದು ಘೋಷಿಸಿದ್ದರು.
ದೇಶದ ಮೊದಲ ಜಲ ಮೆಟ್ರೋ ಸೇವೆ ಕೇರಳದಲ್ಲಿ ಕಳೆದ ವರ್ಷ ಆರಂಭವಾಗಿತ್ತು. ಪ್ರಧಾನಿ ನರೇಂದ್ರ ಮೋದಿ ವಾಟರ್ ಮೆಟ್ರೋ ಯೋಜನೆಯನ್ನು ಏಪ್ರಿಲ್ 25ರಂದು ಉದ್ಘಾಟಿಸಿದ್ದರು. ಕೊಚ್ಚಿಯ ಪೋರ್ಟ್ ಸಿಟಿಯ ಸುತ್ತಲಿನ 10 ದ್ವೀಪಗಳಲ್ಲಿ ಈ ಮೆಟ್ರೋ ಸಂಚಾರ ಮಾಡುತ್ತಿದ್ದು, 8 ಎಲೆಕ್ಟ್ರಿಕ್ ಬೋಟ್ಗಳು, 38 ಟರ್ಮಿನಲ್ಗಳ ಮೂಲಕ ವಾಟರ್ ಮೆಟ್ರೋ ಸೇವೆ ನೀಡುತ್ತಿದೆ.