ಬಾಗಲಕೋಟೆ: ಜಮಖಂಡಿ ಓಲೇಮಠದ ಶ್ರೀ ಡಾ.ಅಭಿನವ ಕುಮಾರ ಚೆನ್ನಬಸವ ಸ್ವಾಮೀಜಿ (65) ಲಿಂಗೈಕ್ಯರಾಗಿದ್ದಾರೆ. ಸ್ವಾಮೀಜಿಗಳು ಶುಗರ್, ಬಿಪಿ, ಹೃದಯ ಸಮಸ್ಯೆಯಿಂದ ಕಳೆದ ಎರಡು ವರ್ಷದಿಂದ ಬಳಲುತ್ತಿದ್ದರು. ನಿನ್ನೆ ರಾತ್ರಿ 9:30 ಕ್ಕೆ ಜೀವ ತ್ಯಜಿಸಿದ್ದಾರೆ. ಸವದತ್ತಿಯ ಗೊರವಿನಕೊಳ್ಳದ ಓಲೆಮಠದ ಶಾಖಾಮಠದಲ್ಲಿ ಕೊನೆಯುಸಿರೆಳೆದಿದ್ದಾರೆ.
ಬೆಳಗ್ಗೆ 9:30 ರ ನಂತರ ಗೊರವಿನಕೊಳ್ಳ ಸವದತ್ತಿಯಲ್ಲಿ ಪಾರ್ಥಿವ ಶರೀರ ಮೆರವಣಿಗೆ ನಡೆಯಲಿದೆ. ನಂತರ ಬೆಳಗ್ಗೆ 11 ಕ್ಕೆ ಜಮಖಂಡಿಗೆ ಸಾಗಿಸಲಾಗುವುದು. ಓಲೆಮಠದ ಆವರಣದಲ್ಲಿ ಸಾರ್ವಜನಿಕರಿಗೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು. ಸಂಜೆ 5 ಗಂಟೆಗೆ ಜಮಖಂಡಿ ನಗರದಲ್ಲಿ ಪಾರ್ಥಿವ ಶರೀರ ಮೆರವಣಿಗೆ ಇರಲಿದೆ.
ಸಂಜೆ 7 ಗಂಟೆಗೆ ಮಠದ ಆವರಣದಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ. ಲಿಂಗಾಯತ ಧಾರ್ಮಿಕ ವಿಧಿವಿಧಾನದ ಪ್ರಕಾರ ಅಂತ್ಯ ಸಂಸ್ಕಾರ ನಡೆಯಲಿದೆ. ಚೆನ್ನಬಸವ ಸ್ವಾಮೀಜಿ ಅವರು ಐದು ಭಾಷೆ ಮಾತನಾಡುತ್ತಿದ್ದರು. ಹಂಪಿ ವಿವಿಯಲ್ಲಿ ಎಂಎಪಿ, ಪಿ.ಹೆಚ್ಡಿ ಮುಗಿಸಿದ್ದರು. ನಾಲ್ಕು ಮಹಾಪ್ರಬಂಧ, 70 ಕ್ಕೂ ಹೆಚ್ಚು ಕೃತಿಗಳ ರಚಿಸಿದ್ದರು. ಜಮಖಂಡಿ ಪ್ರತ್ಯೇಕ ಜಿಲ್ಲೆ ರಚನೆ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದ್ದರು.