ಬಾಗಲಕೋಟೆ: ವಿಜಯಪುರದಲ್ಲಿ ವಕ್ಫ್ ಆಸ್ತಿ ವಿವಾದ ಬೆನ್ನಲ್ಲೇ ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ರೈತರ ಜಮೀನನ್ನು ವಕ್ಫ್ ಖಾತೆಗೆ ಸೇರಿಸಲು ತೋರಿದ ಕೈಚಳಕ ಬಯಲಾಗಿತ್ತು. ಇದರಿಂದ ಆಕ್ರೋಶಗೊಂಡ ರೈತರು ಹೋರಾಟಕ್ಕೆ ಇಳಿದಿದ್ದರು. ಇದರ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ, ಪಹಣಿಗಳಲ್ಲಿದ್ದ ವಕ್ಫ್ ಹೆಸರನ್ನು ಡಿಲೀಟ್ ಮಾಡಲಾಗಿದೆ. ಇದರ ಬೆನ್ನಲ್ಲೇ ಹಿಂದೂ ಸ್ಮಶಾನ ಜಾಗಗಳು ಸಹ ವಕ್ಪ್ ಮಂಡಳಿಗೆ ಸೇರಿದೆ.
ಜಮಖಂಡಿ ತಾಲೂಕಿನ ಸನಾಳ ಗ್ರಾಮದ 2 ಎಕರೆ 30 ಗುಂಟೆ ಮತ್ತು ರಬಕವಿ ಬನಹಟ್ಟಿ ತಾಲೂಕಿನ ಹೊಸೂರು ಗ್ರಾಮದ 1 ಎಕ್ರೆ 39 ಗುಂಟೆ ರುದ್ರಭೂಮಿ ಜಾಗಗಳು ವಕ್ಪ್ ಮಂಡಳಿಗೆ ಸೇರಿವೆ ಎಂದು ಪಹಣಿಯಲ್ಲಿ ದಾಖಲಿಸಲಾಗಿದೆ. ಸಾರ್ವಜನಿಕರ ಅವಶ್ಯಕತೆಗಾಗಿ ಹೊಸೂರು ಗ್ರಾಮದ ಸನ್ನವ್ವ ಕೋಲಾರ್ ಎಂಬುವರು ತಮ್ಮ ಜಮೀನನ್ನು ಹಿಂದೂ ರುದ್ರ ಭೂಮಿಗೆ ಕೊಡುಗೆಯಾಗಿ ನೀಡಿದ್ದಾರೆ.
ಇಲ್ಲಿ ನಾವು ಅಂತ್ಯಕ್ರಿಯೆ ನಡೆಸುತ್ತಾ ಬಂದಿದ್ದೇವೆ. ಈ ಜಾಗ ವಕ್ಫ್ ಮಂಡಳಿಗೆ ಸೇರಿದ್ದು ಹೇಗೆ ಎಂದು ಪ್ರಶ್ನಿಸಿ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹಿಂದೂ ರುದ್ರಭೂಮಿ ಎಂದು ಉಲ್ಲೇಖವಾಗಿದ್ದ ಜಾಗದ ಪಹಣಿಯಲ್ಲಿ 2020ರ ಅಕ್ಟೋಬರ್ 13 ರಿಂದ ಖಬರಸ್ಥಾನ ಸುನ್ನಿ ವಕ್ಪ್ ಹೆಸರಿಗೆ ದಾಖಲಾಗಿದೆ.
ಅಚ್ಚರಿ ಏನೆಂದರೆ ಹೊಸೂರು ಗ್ರಾಮದ ಜಾಗದ ಮೇಲೆ 2013 ರಲ್ಲಿ ಜಮಖಂಡಿಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 3 ಲಕ್ಷ ರೂ. ಸಾಲ ನೀಡಿದೆ. ಬ್ಯಾಂಕ್ ಸಾಲ ನೀಡಿದ್ದು ಪಹಣಿಯಲ್ಲಿ ಉಲ್ಲೇಖಿಸಲಾಗಿದೆ. ಹೀಗಿದ್ದರೂ ಈ ಜಾಗ ವಕ್ಫ್ ಬೋರ್ಡ್ಗೆ ಸೇರಿದ್ದು ಹೇಗೆ ಎಂದು ರೈತರು ಪ್ರಶ್ನಿಸಿದ್ದಾರೆ.