ಚೆನ್ನೈ:-ಸಿವಿಲ್ ಜಡ್ಜ್ ಆಗಿ ನೇಮಕಗೊಂಡ 23 ವರ್ಷದ ಯುವತಿ ಸಾಧನೆಗೆ ಭರಪೂರ ಮೆಚ್ಚುಗೆ ವ್ಯಕ್ತವಾಗಿದೆ.
ಪುಲಿಯೂರು ಗ್ರಾಮದ 23 ವರ್ಷದ ಬುಡಕಟ್ಟು ಯುವತಿ ಶ್ರೀಪತಿ. ಈ ಸಾಧನೆ ಮಾಡಿದ ಯುವತಿ.
ಈ ಬಗ್ಗೆ ಶ್ಲಾಘಿಸಿದ ಇಲ್ಲಿನ ಸಿಎಂ ಸ್ಟಾಲಿನ್, ಗುಡ್ಡಗಾಡಿನ ಹಳ್ಳಿಯೊಂದರ ಬುಡಕಟ್ಟು ಸಮುದಾಯದ ಯುವತಿ, ಹೆಚ್ಚಿನ ಸೌಕರ್ಯಗಳಿಲ್ಲದೆಯೂ ಈ ಸ್ಥಾನಮಾನ ಗಳಿಸಿರುವುದನ್ನು ನೋಡಿ ನನಗೆ ತುಂಬಾ ಸಂತೋಷವಾಗಿದೆ ಎಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಡಿಎಂಕೆಯ ‘ದ್ರಾವಿಡ ಮಾದರಿ ಸರ್ಕಾರ’ ತಮಿಳು ಮಾಧ್ಯಮದ ವಿದ್ಯಾರ್ಥಿಗಳಿಗೆ ಸರ್ಕಾರಿ ಉದ್ಯೋಗಗಳಲ್ಲಿ ಆದ್ಯತೆ ನೀಡುವ ನೀತಿಯನ್ನು ಪರಿಚಯಿಸಿದೆ. ಇದರ ಪರಿಣಾಮವೇ ಶ್ರೀಪತಿ ನ್ಯಾಯಾಧೀಶೆಯಾಗಿ ಆಯ್ಕೆಯಾಗಲು ನೆರವಾಯಿತು. ಶ್ರೀಪತಿ ಆಯ್ಕೆಯಾಗಿರುವುದನ್ನು ನೋಡಿ ನಾನು ಹೆಮ್ಮೆಪಡುತ್ತೇನೆ ಮತ್ತು ಶ್ರೀಪತಿಗೆ ಬೆಂಬಲವಾಗಿ ನಿಂತ ತಂದೆ-ತಾಯಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ತಮಿಳುನಾಡಿನಲ್ಲಿ ಸಾಮಾಜಿಕ ನ್ಯಾಯದ ಪದವನ್ನು ಹೇಳಲು ಹಿಂಜರಿಯುವವರಿಗೆ, ಶ್ರೀಪತಿಯಂತಹ ವ್ಯಕ್ತಿಗಳ ಯಶಸ್ಸು ತಮಿಳುನಾಡಿನ ಪ್ರತಿಕ್ರಿಯೆಯಾಗಿದೆ ಎಂದು ಸ್ಟಾಲಿನ್ ಬರೆದುಕೊಂಡಿದ್ದಾರೆ.
ತಮ್ಮ ಊರಿನಿಂದ ಸುಮಾರು 250 ಕಿಲೋ ಮೀಟರ್ ದೂರದಲ್ಲಿರುವ ಚೆನ್ನೈ ಹೋಗಿ ಶ್ರೀಪತಿ ಪರೀಕ್ಷೆ ಎದುರಿಸಿ ಬಂದಿದ್ದರು. 2023ರ ನವೆಂಬರ್ ತಿಂಗಳಲ್ಲಿ ಅಂತಿಮ ಆಯ್ಕೆಗಾಗಿ ಸಂದರ್ಶನಕ್ಕೆ ಹಾಜರಾಗಿದ್ದರು. ಜಡ್ಜ್ ಆಗಿ ಆಯ್ಕೆಯಾದ ಬೆನ್ನಲ್ಲೇ ಶ್ರೀಪತಿ ಗ್ರಾಮದಲ್ಲಿ ಸಂಭ್ರಮ ಮನೆ ಮಾಡಿದೆ. ಅಲ್ಲದೆ, ಡೋಲು, ಹೂಮಾಲೆ ಮತ್ತು ಭವ್ಯವಾದ ಮೆರವಣಿಗೆಯೊಂದಿಗೆ ಶ್ರೀಪತಿಗೆ ಅದ್ಧೂರಿ ಸ್ವಾಗತ ಸಮಾರಂಭವನ್ನು ಸಹ ಆಯೋಜಿಸಿತ್ತು.
ಶ್ರೀಪತಿ ಅವರು ಬಿಎ ಮತ್ತು ಬ್ಯಾಚುಲರ್ ಆಫ್ ಲಾ ವ್ಯಾಸಂಗ ಮಾಡುವ ಮೊದಲು ಯಲಗಿರಿ ಹಿಲ್ಸ್ನಲ್ಲಿ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದರು.
ರಾಜ್ಯ ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್ ಕೂಡ ಶ್ರೀಪತಿ ಅವರನ್ನು ಅಭಿನಂದಿಸಿದ್ದಾರೆ. ತಮಿಳು ಮಾಧ್ಯಮದಲ್ಲಿ ಓದಿದವರಿಗೆ ಸರ್ಕಾರಿ ಉದ್ಯೋಗಗಳಿಗೆ ಆದ್ಯತೆ ನೀಡುವ ನಮ್ಮ ದ್ರಾವಿಡ ಮಾದರಿ ಸರ್ಕಾರದ ಸುಗ್ರೀವಾಜ್ಞೆಯ ನೆರವಿನಿಂದ ಶ್ರೀಪತಿ ಅವರು ನ್ಯಾಯಾಧೀಶೆಯಾಗಿ ಆಯ್ಕೆಯಾಗಿರುವುದು ನಮಗೆ ಸಂತೋಷ ತಂದಿದೆ. ಅದರಲ್ಲೂ ತನ್ನ ಮಗು ಹುಟ್ಟಿದ ಎರಡು ದಿನಗಳಲ್ಲೇ ನಡೆದ ಪರೀಕ್ಷೆಯ ಕ್ಲಿಷ್ಟಕರ ವಾತಾವರಣದಲ್ಲಿ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಬಹು ದೂರ ಪ್ರಯಾಣಿಸಿ ಪರೀಕ್ಷೆಗೆ ಹಾಜರಾದ ಶ್ರೀಪತಿ ಸಂಕಲ್ಪ ನಿಜಕ್ಕೂ ಶ್ಲಾಘನೀಯ ಎಂದಿದ್ದಾರೆ.
ಇನ್ನೂ ಶ್ರೀಪತಿ, ರಾಜ್ಯದ ಅತ್ಯಂತ ಹಿಂದುಳಿದ ಗುಡ್ಡಗಾಡು ಪ್ರದೇಶಗಳಿಂದ ಬಂದವಳು ಎಂಬ ಕಾರಣಕ್ಕೆ ಎಲ್ಲರ ಗಮನ ಸೆಳೆದಿಲ್ಲ. ಮಗುವಿಗೆ ಜನ್ಮ ನೀಡಿದ ಕೆಲವೇ ದಿನಗಳಲ್ಲಿ ಪರೀಕ್ಷೆಯನ್ನು ಎದುರಿಸಿದ್ದಕ್ಕಾಗಿ ಎಲ್ಲರ ಮೆಚ್ಚುಗೆ ಪಾತ್ರರಾಗಿದ್ದಾರೆ. ಸಿವಿಲ್ ಜಡ್ಜ್ ಆಗಿ ನೇಮಕವಾಗಿರುವ ಶ್ರೀಪತಿಗೆ ರಾಜ್ಯಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಆಕೆಯ ಸಾಧನೆ ಇತರೆ ಹೆಣ್ಣುಮಕ್ಕಳಿಗೆ ಸ್ಫೂರ್ತಿಯಾಗಿದೆ.