ಅಮೆರಿಕದ ಕ್ರಿಪ್ಟೋ ಲೋಕದ ಜೀನಿಯಸ್ ಎಂದು ಖ್ಯಾತಿ ಘಳಿಸಿದ್ದ ಸ್ಯಾಮ್ ಬ್ಯಾಂಕ್ಮ್ಯಾನ್ ಫ್ರೈಡ್ ಇದೀಗ 25 ವರ್ಷ ಜೈಲುಶಿಕ್ಷೆಗೆ ಗುರಿಯಾಗಿದ್ದಾರೆ. 32 ವರ್ಷದ ಈ ಯುವ ಉದ್ಯಮಿ ಮುಂದಿನ 25 ವರ್ಷ ಜೈಲಿನಲ್ಲೇ ಕಳೆಯುವ ಸ್ಥಿತಿ ನಿರ್ಮಾಣವಾಗಿದೆ.
8 ಬಿಲಿಯಲ್ ಡಾಲರ್ ಹಣಕಾಸು ವಂಚನೆಯ ಆರೋಪದಲ್ಲಿ ಸ್ಯಾಮ್ ಬ್ಯಾಂಕ್ಮ್ಯಾನ್ ಫ್ರೈಡ್ ಆರೋಪಿಯಾಗಿದ್ದಾರೆ. ಈತನ ಮೇಲಿದ್ದ ಎಲ್ಲಾ ಎಂಟು ದೂರುಗಳಲ್ಲೂ ಆರೋಪ ಸಾಬೀತಾಗಿದೆ. ತೀರ್ಪು ನೀಡಿದ ನ್ಯಾಯಾಧೀಶರು, ಎಸ್ಬಿಎಫ್ ಅವರನ್ನು ಅಮೆರಿಕದ ಹಣಕಾಸು ಇತಿಹಾಸದಲ್ಲೇ ಅತಿದೊಡ್ಡ ವಂಚಕ ಎಂದಿದ್ದಾರೆ.
ಅಮೆರಿಕದ ಸ್ಯಾಮ್ ಬ್ಯಾಂಕ್ಮನ್ ಫ್ರೈಡ್ 2019ರಲ್ಲಿ ಎಫ್ಟಿಎಕ್ಸ್ ಎಂಬ ಕ್ರಿಪ್ಟೋಕರೆನ್ಸಿ ಎಕ್ಸ್ಚೇಂಜ್ ಅನ್ನು ತೆರೆದಿದ್ದರು. ಆಗ ಕ್ರಿಪ್ಟೋಕರೆನ್ಸಿ ಬಹಳ ದೊಡ್ಡ ಭರವಸೆ ಹುಟ್ಟಿಸಿದ ಕ್ಷೇತ್ರವಾಗಿತ್ತು. ಕಡಿಮೆ ಶುಲ್ಕ ಹಾಗೂ ವೇಗದ ವಹಿವಾಟು ಇವೆರಡನ್ನೂ ಕೊಡುತ್ತಿದ್ದರಿಂದ ಎಫ್ಟಿಎಕ್ಸ್ ಬಹಳ ವೇಗದಲ್ಲಿ ಬೆಳೆಯಿತು. ಬಹಳ ಬೇಗ ಇದು ವಿಶ್ವದ ಎರಡನೇ ಅತಿದೊಡ್ಡ ಕ್ರಿಪ್ಟೋ ಎಕ್ಸ್ಚೇಂಜ್ ಎನಿಸಿತು.
ನೋಡನೋಡುತ್ತಿದ್ದಂತೆಯೇ ಸ್ಯಾಮ್ ಬ್ಯಾಂಕ್ಮ್ಯಾನ್ ಫ್ರೈಡ್ ಅತಿಕಿರಿಯ ವಯಸ್ಸಿನ ಬಿಲಿಯನೇರ್ ಎನಿಸಿದರು. ಅವರ ಸಂಪತ್ತು ಮೌಲ್ಯ 26.5 ಬಿಲಿಯನ್ ಡಾಲರ್ಗೆ ಹೋಯಿತು. ಸ್ಯಾಮ್ ಬ್ಯಾಂಕ್ಮ್ಯಾನ್ ಫ್ರೈಡ್ ಎಫ್ಟಿಎಕ್ಸ್ ಅಲ್ಲದೇ ಇನ್ನೂ ಹಲವು ಕಂಪನಿಗಳನ್ನು ಹೊಂದಿದ್ದರು. ಅದರಲ್ಲಿ ಅಲಮೇಡಾ ರಿಸರ್ಚ್ ಒಂದು. ಎಫ್ಟಿಎಕ್ಸ್ನಿಂದ ಹೊರಡಿಸಲಾಗಿದ್ದ ಎಫ್ಟಿಟಿ ಎಂಬ ಕ್ರಿಪ್ಟೋ ಟೋಕನ್ನಲ್ಲಿ ಅಲಮೇಡಾ ಕಂಪನಿ ಬಹಳ ದೊಡ್ಡ ಮೊತ್ತದ ಹೂಡಿಕೆ ಮಾಡಿತ್ತು. ಇದು ಹಿತಾಸಕ್ತಿ ಘರ್ಷಣೆಗೆ ಎಡೆ ಮಾಡಿಕೊಟ್ಟಿತು. ಇಲ್ಲಿಂದ ಎಫ್ಟಿಎಕ್ಸ್ನ ಪತನ ಆರಂಭವಾಗುತ್ತದೆ.
2022ರ ನವೆಂಬರ್ ತಿಂಗಳಲ್ಲಿ ಎದುರಾಳಿ ಕಂಪನಿಯ ಸಿಇಒವೊಬ್ಬರು ಎಫ್ಟಿಎಕ್ಸ್ನ ಹಣಕಾಸು ಸ್ಥಿತಿ ಬಗ್ಗೆ ಅನುಮಾನ ಮೂಡಿಸುವಂತೆ ಟ್ವೀಟ್ ಮಾಡಿದ್ದು, ಇದು ಬಹಳಷ್ಟು ಹೂಡಿಕೆದಾರರನ್ನು ಕಂಗಾಲಾಗಿಸಿತ್ತು. ಎಫ್ಟಿಎಕ್ಸ್ ಎಕ್ಸ್ಚೇಂಜ್ನಲ್ಲಿ ತಾವಿರಿಸಿದ್ದ ಕ್ರಿಪ್ಟೋವನ್ನು ಹಿಂಪಡೆಯಲು ಎಲ್ಲರೂ ಮುಗಿಬಿದ್ದರು. ಆದರೆ ಅಷ್ಟು ಹೊರಹರಿವಿಗೆ ಸಾಕಾಗುಷ್ಟು ಹಣ ಎಫ್ಟಿಎಕ್ಸ್ನಲ್ಲಿ ಇರಲಿಲ್ಲ. ಆಗ ಎಫ್ಟಿಎಕ್ಸ್ನಿಂದ ಸಾಕಷ್ಟು ಮೊತ್ತದ ಹೂಡಿಕೆದಾರರ ಹಣ ನಾಪತ್ತೆಯಾಗಿರುವುದು ಬಹಿರಂಗವಾಗುತ್ತದೆ.
ಪ್ರಕರಣದಲ್ಲಿ ಸ್ಯಾಮ್ ಬ್ಯಾಂಕ್ಮ್ಯಾನ್ ಫ್ರೈಡ್ನನ್ನು ಬಹಾಮಾಸ್ನಲ್ಲಿ ಬಂಧಿಸಲಾಯಿತು. ತನ್ನದೇನೂ ತಪ್ಪಿಲ್ಲ ಎಂದು ಈತ ಹೇಳಿಕೊಂಡರೂ ಎಂಟು ಸಂಗತಿಗಳಲ್ಲಿ ಇವರ ಮೇಲಿನ ಆರೋಪ ಕೋರ್ಟ್ನಲ್ಲಿ ಸಾಬೀತಾಗಿದೆ. ಈಗ ಬರೋಬ್ಬರಿ 25 ವರ್ಷ ಜೈಲುಶಿಕ್ಷೆ ಅನುಭವಿಸಬೇಕಾಗಿ ಬಂದಿದೆ.