ಆಕೆಗೆ ಬರೋಬ್ಬರಿ 78 ವಯಸ್ಸು. ಹಣ್ಣುಹಣ್ಣಾದ ಶರೀರ,ಎದ್ದು ಓಡಾಡಲಾಗದ ಸ್ಥಿತಿ. ಮುಪ್ಪಿನ ಕಾಲಕ್ಕೆ ಮಕ್ಕಳು ಜೋಪಾನ ಮಾಡ್ತಾರೆ ಅಂತಾ ಆಸ್ತಿ ಕೊಟ್ರೆ ಆಕೆಯನ್ನ ಯಾರೂ ತಿರುಗಿ ನೋಡ್ಲಿಲ್ಲ ಅಂತಾ ಕೊಟ್ಟ ಆಸ್ತಿಯನ್ನ ಕೋರ್ಟ್ ಮೂಲಕ ವಾಪಸ್ ಪಡೆದುಕೊಂಡಿದ್ದಾಳೆ. ಕೋರ್ಟ್ ಆದೇಶ ಬಂದಾಗಿನಿಂದ ಹಕ್ಕು ಬದಲಾವಣೆ ಮಾಡಿಕೊಡಿ ಅಂತಾ ತಹಶಿಲ್ದಾರರ ಕಚೇರಿಗೆ ಅಲೆಯುತ್ತಿದ್ದಾಳೆ ವಿಷಾದ ಅಂದ್ರೆ ಮಾನವೀಯತೆ ಮಾಯವಾಗಿದ್ದಕ್ಕೆ ಕಾನೂನಿಗೆ ಮೊರೆಹೋದ ಮುದಕಿಗೆ ಅದು ಕೂಡಾ ಪ್ರಯೋಜನವಾಗ್ತಿಲ್ಲ. ಅರೆ ಏನ್ ವಿಚಿತ್ರ ಸ್ಟೋರಿಯಪ್ಪಾ ಅನಿಸ್ತಿದೆ ಅಲ್ವಾ ಹಾಗಾದ್ರೆ ನೀವೇ ನೋಡಿ
ಒಂದು ಹಳೆಯ ಟ್ರಂಕ್….ಒಂದಷ್ಟು ಮನೆಬಳಕೆಯ ವಸ್ತುಗಳು…ಈ ವಸ್ತುಗಳ ಮುಂದೆ ಕುಳಿತಿರುವ ಹಣ್ಣುಹಣ್ಣಾದ ಶರೀರವುಳ್ಳ 78ರ ಹಿರಿಜೀವ… ಹೌದು ಈ ಎಲ್ಲ ದೃಶ್ಯಾವಳಿಗಳು ಕಾಣಬಂದದ್ದು ಗದಗ ಜಿಲ್ಲೆ ಮುಂಡರಗಿ ತಾಲ್ಲೂಕಿನ ತಹಶಿಲ್ದಾರರ ಕಚೇರಿಯ ಮುಂಭಾಗದಲ್ಲಿ. ಅಷ್ಟಕ್ಕೂ ಹೀಗೆ ನಲುಗುತ್ತಾ ನರಳುತ್ತಾ ಬಂದವರಿಗೆಲ್ಲ ತನ್ನ ಸಂಕಟ ತೋಡುತ್ತಾ ಕುಳಿತ ಅಜ್ಜಿಯ ಹೆಸರು ದ್ಯಾಮವ್ವ ಶೇಖರಪ್ಪ ಅಬ್ಬಿಗೇರಿ ಅಂತಾ. ಮೂಲತಃ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಹಳ್ಳಿಕೇರಿ ಗ್ರಾಮದ ನಿವಾಸಿ. ಗಂಡ ತೀರಿದ ಬಳಿಕ ತನ್ನನ್ನ ಜೋಪಾನ ಮಾಡ್ತಾರೆ ಅಂತಾ ತನ್ನ ಆಸ್ತಿಯನ್ನೆಲ್ಲ ತನ್ನ ಹೆಣ್ಣು ಮಕ್ಕಳಿಗೆ ಮಾಡಿದ ಈಕೆಯನ್ನ ಮಕ್ಕಳು ಸರಿಯಾಗಿ ನೋಡಿಕೊಳ್ಳಲಿಲ್ಲ ಅನ್ನೊದು ಈ ಅಜ್ಜಿಯ ಆರೋಪ.
ಈ ಕಾರಣಕ್ಕಾಗಿಯೇ ಕೋರ್ಟ್ ಮೆಟ್ಟಿಲೇರಿ ತಾನು ಕೊಟ್ಟಿದ್ದ ಆಸ್ತಿಯನ್ನು ವಾಪಸ್ ಪಡೆದು,ಹಕ್ಕು ಬದಲಾವಣೆಗಾಗಿ ಮುಂಡರಗಿ ತಹಶಿಲ್ದಾರ ಕಚೇರಿ ಎದುರು ಒಂದು ವಾರದಿಂದ ಬೀಡು ಬಿಟ್ಟಿದ್ದ ಈಕೆ ಚುನಾವಣೆಗೂ ಮುನ್ನವೇ ಕಂದಾಯ ಅಧಿಕಾರಿಗಳಿಗೆ ಈ ವಿಷಯ ತಿಳಿಸಿದ್ದು ಎಲೆಕ್ಷನ್ ಮುಗಿದ ಮೇಲೆ ಮಾಡಿಕೊಡುವುದಾಗಿ ತಿಳಿಸಿದ್ರಂತೆ. ಅಧಿಕಾರಿಗಳ ಮಾತಿನಂತೆ ಎಲೆಕ್ಷನ್ ಮುಗಿದು ಸರ್ಕಾರ ರಚನೆಯಾದ್ರು ಈ ಅಜ್ಜಿಯ ಸಮಸ್ಯೆ ಬಗೆಹರಿಯದ್ದಕ್ಕೆ ಸ್ವತಃ ತಹಶಿಲ್ದಾರ ಕಚೇರಿ ಎದುರೇ ಮುಕ್ಕಾಂ ಹೂಡಿದ್ದ ಮುದುಕಿಯನ್ನು ಹಿರಿಮಗಳು ಬಂದು ಸಮಾಧಾನ ಮಾಡಿ ವಾಪಸ್ ಕರೆದುಕೊಂಡು ಹೋಗಿದ್ದಾಳೆ.
ಇನ್ನೂ ಹಕ್ಕುಬದಲಾವಣೆಗಾಗಿ ನಿರಂತರ ಧರಣಿಗೆ ಮುಂದಾದ ವೃದ್ದೆಗೆ ಗ್ರಾಮಸ್ಥರು ತಿಳಿಹೇಳಿದ ಬಳಿಕ ಹಿರಿಮಗಳ ಜೊತೆ ಮನೆಗೆ ವಾಪಸ್ ಆದ ಅಜ್ಜಿಯ ಮಗಳನ್ನ ಈ ಬಗ್ಗೆ ಕೇಳಿದ್ರೆ ನಾವು ನಮ್ಮ ತಾಯಿಯನ್ನು ಸರಿಯಾಗಿ ಆರೈಕೆ ಮಾಡುತ್ತಲೇ ಬಂದಿದ್ದೇವೆ. ಅವಳಿಗೆ ಮೊದಲಿನಿಂದಲೂ ಆಸ್ತಿಯ ಮೇಲೆ ಈತರ ಆಸೆಯಿದ್ದು, ಆವಾಗವಾಗ ಹೀಗೆ ಮಾಡುತ್ತಾಳೆ ಅಂತಾರೆ. ಆದಾಗ್ಯೂ ನಮ್ಮ ತಾಯಿಯನ್ನು ಚೆನ್ನಾಗಿ ನೋಡಿಕೊಳ್ತಿವಿ ಅಂತಾ ಅಜ್ಜಿಯ ಎದುರೇ ಮಾಧ್ಯಮಗಳಿಗೆ ಭರವಸೆ ನೀಡ್ತಾರೆ. ಒಟ್ನಲ್ಲಿ ಒಂದೆಡೆ ಮಕ್ಕಳೆಂಬ ಮಮಕಾರ ಮತ್ತೊಂದೆಡೆ ಸರಕಾರಿ ನೌಕರಸ್ಥರ ಅಧಿಕಾರ ಇವೆರಡು ಸೇರಿ ಈಗಲಾದರೂ ಅಜ್ಜಿಯ ಸಮಸ್ಯೆಗೆ ನೀಡಲೇಬೇಕಿದೆ ಪರಿಹಾರ ಎಂಬುದು ಪ್ರಜ್ಞಾವಂತರ ಮಾತಾಗಿದೆ.