ಬಂಡೀಪುರ ಕಾಡಿನಿಂದ ಗ್ರಾಮದೊಳಗೆ ನುಗ್ಗಿ ಆತಂಕ ಸೃಷ್ಟಿಸಿದ್ದ ಜಾಂಬವಂತನ್ನು ಅರಣ್ಯ ಇಲಾಖೆ ಸೆರೆ ಹಿಡಿದು ಮತ್ತೆ ಕಾಡಿಗೆ ಬಿಟ್ಟ ಘಟನೆ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ನಡೆದಿದೆ.
ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಕೆಬ್ಬೆಪುರ ಗ್ರಾಮದ ಶಾಲೆ ಬಳಿ ಬಂಡೀಪುರ ಅಭಯಾರಣ್ಯದಿಂದ ಹೊರಬಂದು ಕಳೆದ ಮೂರ್ನಾಲ್ಕು ದಿನಗಳಿಂದಲೂ ಕಾಣಿಸಿಕೊಂಡಿದ್ದ ಕರಡಿಯನ್ನು ಅಣ್ಣೂರು ಕೇರಿ ಬಳಿ ಅರಣ್ಯ ಇಲಾಖೆ ಸೆರೆ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.
ಗುಂಡ್ಲುಪೇಟೆ ಬಫರ್ ಜೋನ್ ಆರ್ಎಫ್ ಒ ಬಿ.ಎಂ. ಮಲ್ಲೇಶ್ ಹಾಗೂ ಸಿಬ್ಬಂದಿ ಕರಡಿ ಸೆರೆ ಹಿಡಿದು ಕಾಡಿಗೆ ಬಿಡುವಲ್ಲಿ ಸಫಲರಾಗಿದ್ದಾರೆ. ಕೆಬ್ಬೇಪುರ ಗ್ರಾಮದ ಸರ್ಕಾರಿ ಶಾಲೆ ಬಳಿ ಕರಡಿ ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಆತಂಕಕ್ಕೆ ಕಾರಣವಾಗಿತ್ತು. ನಂತರ ಅಣ್ಣೂರು ಕೇರಿಗ್ರಾಮದ ಬಳಿಯೂ ಕೂಡ ಕರಡಿ ಅಡ್ಡಾಡಿ ಜನರಲ್ಲಿ ಆತಂಕ ಸೃಷ್ಟಿಸಿತ್ತು. ಜಾಗೃತರಾದ ಅರಣ್ಯ ಇಲಾಖೆ ತಕ್ಷಣ ಪಶು ವೈದ್ಯ ಡಾ. ವಾಸೀ ಮಿರ್ಜಾ ಸ್ಥಳಕ್ಕೆ ಕರೆಸಿ ಕರಡಿಗೆ ಅರವಳಿಕೆ ಚುಚ್ಚು ಮದ್ದು ನೀಡಿ ಜ್ಞಾನ ತಪ್ಪಿಸಿದ್ದಾರೆ. ಬಳಿಕೆ ಕರಡಿಯನ್ನು ಬೋನಿನೊಳಗೆ ಹಾಕಿಕೊಂಡು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮೂಲೆಹೊಳೆ ವಲಯದಲ್ಲಿ ಬಿಡಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.