ಲಕ್ನೋ: ಉತ್ತರಪ್ರದೇಶದ (Uttarpradesh) ಪಶು ಸಂಗೋಪನಾ ಸಚಿವ ಧರಂಪಾಲ್ ಸಿಂಗ್ ಸೈನಿ (Dharampal Singh Saini ) ಅವರು ರೈಲು ಹತ್ತಲು ತಡವಾಯಿತು ಎಂದು ತಮ್ಮ ಕಾರನ್ನು ನೇರವಾಗಿ ರೈಲ್ವೇ ಪ್ಲಾಟ್ಫಾರ್ಮಗೆ ನುಗ್ಗಿಸಿದ ಘಟನೆಯೊಂದು ನಡೆದಿದೆ. ಸಚಿವರು ತಮ್ಮ ವಿವಿಐಪಿ ಎಸ್ಯುವಿ ಕಾರನ್ನು ರೈಲು ನಿಲ್ದಾಣದೊಳಗೆ ಚಲಾಯಿಸಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಅಲ್ಲದೆ ಸಚಿವರ ನಡೆಗೆ ಖಂಡನೆ ವ್ಯಕ್ತವಾಗುತ್ತಿದೆ.
ಸಚಿವರು ಕಾರ್ಯಕ್ರಮವೊಂದರ ನಿಮಿತ್ತ ಲಕ್ನೋದಿಂದ ರೈಲಿನಲ್ಲಿ ಬರೇಲಿಗೆ ಪ್ರಯಾಣ ಬೆಳೆಸಲು ಹೌರಾ ಅಮೃತಸರ ಎಕ್ಸ್ ಪ್ರೆಸ್ ರೈಲನ್ನು ಹಿಡಿಯಬೇಕಿತ್ತು. ಹೀಗಾಗಿ ಅವರು ಚಾರ್ಬಾಗ್ ರೈಲು ನಿಲ್ದಾಣದಲ್ಲಿ ಪ್ಲಾಟ್ಫಾರ್ಮ್ (Railway Flatform) ಸಂಖ್ಯೆ 4ಕ್ಕೆ ರೈಲು ಆಗಮಿಸುತ್ತದೆ. ಆದರೆ ಅವರು ರೈಲ್ವೇ ಪ್ಲಾಟ್ಫಾರ್ಮ್ ಗೆ ಬರೋದು ತಡವಾಗಿತ್ತು.
ಈ ಹಿನ್ನೆಲೆಯಲ್ಲಿ ಚಾಲಕ ಕಾರನ್ನು ಅಂಗವಿಕಲರಿಗೆ ಮೀಸಲಿಟ್ಟಿದ್ದ ರ್ಯಾಂಪ್ಗೆ ತೆಗೆದುಕೊಂಡು ಹೋಗಿ ಎಸ್ಕಲೇಟರ್ ಮೂಲಕ ನೇರವಾಗಿ ಪ್ಲಾಟ್ ಫಾರ್ಮ್ ಒಳಗೆ ಚಲಾಯಿಸಿದ್ದಾನೆ. ಇದರ ವೀಡಿಯೋ ವೈರಲ್ ಆಗಿದ್ದು, ಈ ರೀತಿ ಅಧಿಕಾರ ದುರುಪಯೋಗ ಪಡಿಸಿಕೊಳ್ಳುವವರನ್ನು ಕೂಡಲೇ ಸಂಪುಟದಿಂದ ವಜಾ ಮಾಡಿ ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.
ಇತ್ತ ವೈರಲ್ ಆದ ವಿಡಿಯೋ ಕುರಿತು ವಿಪಕ್ಷ ನಾಯಕ ಅಖಿಲೇಶ್ ಯಾದವ್ ಪ್ರತಿಕ್ರಿಯಿಸಿ, ಸಚಿವರು ಪ್ಲಾಟ್ ಫಾರ್ಮ್ ಗೆ ಬುಲ್ಡೋಜರ್ ಕೊಂಡೊಯ್ಯದಿದ್ದಕ್ಕೆ ಜನರು ಅವರಿಗೆ ಕೃತಜ್ಞರಾಗಿರಬೇಕು ಎಂದು ಟೀಕಿಸಿದ್ದಾರೆ. ಇನ್ನು ಘಟನೆಯ ವಿಡಿಯೋವನ್ನು ಕಾಂಗ್ರೆಸ್ ಕೂಡ ಶೇರ್ ಮಾಡಿಕೊಂಡಿದ್ದು ಸಚಿವರ ವಿರುದ್ಧ ವಾಗ್ದಾಳಿ ನಡೆಸಿದೆ.