ತಾಯಿ ಹಸುವನ್ನು ಕಳೆದುಕೊಂಡ ಕರು ತಾಯಿಯ ಅಂತ್ಯಸಂಸ್ಕಾರದ ನಡೆಸಿದ ಸ್ಥಳದಲ್ಲಿ ಒದ್ದಾಡಿ ರೋದಿಸಿದ ದೃಶ್ಯ ಮೈಸೂರಿನಲ್ಲಿ ವೈರಲ್ ಆಗಿದೆ. ಹೂಟಗಳ್ಳಿ ನಗರಸಭೆ ನಿರ್ಲಕ್ಷ್ಯದಿಂದ ಇಲ್ಲಿನ ಎಸ್ಆರ್ಎಸ್ ಬಡಾವಣೆಯಲ್ಲಿ 1.20 ಲಕ್ಷ ರೂ. ಬೆಲೆಬಾಳುವ ಗರ್ಭಿಣಿ ಹಸುವೊಂದು ರಸ್ತೆ ಬದಿಯಲ್ಲಿದ್ದ ಬೋರ್ವೆಲ್ ವಿದ್ಯುತ್ ಸಂಪರ್ಕ ಕಲ್ಪಿಸುವ ಸ್ವಿಚ್ಬಾಕ್ಸ್ ಸ್ಪರ್ಶಿಸಿ ಸ್ಥಳದಲ್ಲೆ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ.
ಬಡಾವಣೆಯ ರವಿಕುಮಾರ್ ಎಂಬುವರು ಮಂಗಳವಾರ ಬೆಳಗ್ಗೆ ತಮ್ಮ ಮನೆಯಿಂದ ಹಸುವನ್ನು ಜಮೀನಿನ ಬಳಿ ಕಟ್ಟಿಹಾಕಲು ಕರೆದುಕೊಂಡು ಹೋಗುತ್ತಿದ್ದ ವೇಳೆ ರಸ್ತೆ ಬದಿಯಲ್ಲಿದ್ದ ಶಾರ್ಟ್ ಸರ್ಕ್ಯೂಟ್ಗೆ ಒಳಗಾಗಿದ್ದ ವಿದ್ಯುತ್ ಸ್ವಿಚ್ಬಾಕ್ಸ್ ಪಕ್ಕದ ಕಬ್ಬಿಣದ ಪೈಪ್ ಸ್ಪರ್ಶಿಸಿ ಸ್ಥಳದಲ್ಲೇ ಒದ್ದಾಡಿ ಪ್ರಾಣ ಬಿಟ್ಟಿದೆ. ಈ ವೇಳೆ ಹಸುವಿನ ಹಗ್ಗ ಹಿಡಿದಿದ್ದ ರವಿಗೂ ವಿದ್ಯುತ್ ಸ್ಪಷ್ಧವಾಗಿ ಆತ ಹಗ್ಗವನ್ನು ತಕ್ಷಣ ಎಸೆದು ಪ್ರಾಣಾಪಾಯದಿಂದ ಪಾರಾದರು ಎನ್ನಲಾಗಿದೆ.
ಕರುಳು ಹಿಂಡಿದ ಕರುವಿನ ರೋಧನ:
ವಿದ್ಯುತ್ ಸ್ಪರ್ಶಿಸಿ ಹಸು ಒದ್ದಾಡಿ ಪ್ರಾಣ ಬಿಟ್ಟಿದ್ದನ್ನು ಕಣ್ಣಾರೆ ಕಂಡ ಕರುವಿನ ರೋಧನ ಕರುಳು ಹಿಂಡಿತು. ಮೃತ ತಾಯಿಯನ್ನು ಮೂಸಿ, ಸ್ಪರ್ಶಿಸಿ, ಅತ್ತಿತ್ತ ಒದ್ದಾಡಿ ರೋಧಿಸಿತು. ಬಳಿಕ ಹಸುವಿನ ಅಂತ್ಯಸಂಸ್ಕಾರ ನಡೆಸಿದಾಗ ಮಣ್ಣನ್ನು ಕಾಲಿನಿಂದ ಕೆರೆಯುವುದು, ಅತ್ತಿಂದಿತ್ತ ಓಡಾಡುವುದು, ಕೊಂಬಿನಲ್ಲಿ ಮಣ್ಣನ್ನು ಎತ್ತುವುದು ಮಾಡುತ್ತಿದ್ದನ್ನುನೋಡಿದ ಸ್ಥಳೀಯರು ಮರುಗಿದರು. ಕೆಲಕಾಲ ಕರುವು ಅಲ್ಲಿಂದ ಕದಲಲೇ ಇಲ್ಲ. ಬಳಿಕ ಮಾಲೀಕ ರವಿ ಕರುವನ್ನು ರಮಿಸಿ ಮನೆಗೆ ಕರೆತಂದರು. ಮನೆಯಲ್ಲೂ ಕರುವಿನ ಹಗ್ಗ ಬಿಚ್ಚಿದರೆ ನೇರವಾಗಿ ಅದರ ತಾಯಿ ಅಂತ್ಯ ಸಂಸ್ಕಾರ ಮಾಡಿದ ಸ್ಥಳಕ್ಕೆ ಓಡುತ್ತಿರುವುದನ್ನು ನೋಡಿದ ಜನರು ಕಂಬನಿ ಮಿಡಿದರು.