ಕೀನ್ಯಾ: 26 ಪ್ರಕರಣಗಳಲ್ಲಿ ವಾದಿಸಿ ಗೆದ್ದಿದ್ದ ಕೀನ್ಯಾದ (Kenya) ಹೈಕೋರ್ಟ್ನ ನಕಲಿ ವಕೀಲನನ್ನು ಪೊಲೀಸರು ಬಂಧಿಸಿದ್ದಾರೆ. ನಕಲಿ ವಕೀಲ ಬ್ರಿಯಾನ್ ಮ್ವೆಂಡಾನನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ವಕೀಲರು ಈ ಎಲ್ಲಾ ಪ್ರಕರಣಗಳಲ್ಲಿ ಮ್ಯಾಜಿಸ್ಟ್ರೇಟ್ಗಳು, ಮೇಲ್ಮನವಿ ನ್ಯಾಯಾಲಯದ ನ್ಯಾಯಾಧೀಶರು ಮತ್ತು ಹೈಕೋರ್ಟ್ ನ್ಯಾಯಾಧೀಶರ ಮುಂದೆ ವಾದ ಮಂಡಿಸಿದ್ದರು. ಮ್ವೆಂಡಾ ಎಲ್ಲರ ಮುಂದೆ ನಿಜವಾದ ವಕೀಲನಂತೆ ನಟಿಸುತ್ತಿದ್ದ.
ಕೀನ್ಯಾದ ಲಾ ಸೊಸೈಟಿಯ ನೈರೋಬಿ ಶಾಖೆಯ ರಾಪಿಡ್ ಆಕ್ಷನ್ ತಂಡಕ್ಕೆ ಈತನ ವಿಚಾರವಾಗಿ ಸಾರ್ವಜನಿಕ ದೂರುಗಳು ಸಲ್ಲಿಕೆಯಾಗಿದ್ದವು. ನಂತರ, ವಕೀಲ ಎಂದು ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದ ಮ್ವೆಂಡಾನನ್ನು ಪೊಲೀಸರು ಬಂಧಿಸಿದ್ದಾರೆ. ಬ್ರಿಯಾನ್ ಮ್ವೆಂಡಾ ಎನ್ಜಾಗಿ ಕೀನ್ಯಾದ ಉಚ್ಚ ನ್ಯಾಯಾಲಯದ ವಕೀಲರಲ್ಲ ಎಂದು ಸಮಾಜದ ಎಲ್ಲಾ ಸದಸ್ಯರಿಗೆ ಮತ್ತು ಸಾರ್ವಜನಿಕರಿಗೆ ತಿಳಿಸಲು ಶಾಖೆಯು ಬಯಸುತ್ತದೆ. ಆತ ಶಾಖೆಯ ಸದಸ್ಯನೂ ಅಲ್ಲ. ಹೆಚ್ಚಿನ ವಿಚಾರಣೆಗಾಗಿ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದಿದ್ದಾರೆ ಎಂದು ಕೀನ್ಯಾದ ಲಾ ಸೊಸೈಟಿಯ ನೈರೋಬಿ ಬ್ರಾಂಚ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿ ಸ್ಪಷ್ಟಪಡಿಸಿದೆ.