ಬ್ರಿಟನ್ನ ಖ್ಯಾತ ಪಾಪ್ ಗಾಯಕ ಲಿಯಾಮ್ ಪಾಯ್ನ್ ಅವರು ತಾವು ತಂಗಿದ್ದ ಹೋಟೆಲ್ ಕೊಠಡಿಯ ಬಾಲ್ಕನಿಯಿಂದ ಬಿದ್ದು ಸಾವನ್ನಪ್ಪಿದ್ದಾರೆ. ಲಿಯಾಮ್ ಪಾಯ್ನ್ ಅವರಿಗೆ 31 ವರ್ಷ ವಯಸ್ಸಾಗಿದ್ದು ಅವರು ಅರ್ಜೆಂಟೀನಾದ ರಾಜಧಾನಿ ಬೋನಸ್ ಐರಿಸ್ನಲ್ಲಿ ಲಿಯಾಮ್ ಹೋಟೆಲ್ ನ್ಲಿ ತಂಗಿದ್ದರು. ಲಿಯಾಮ್ ಸಾವಿಗೆ ಮುನ್ನ ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ಮಾಡಿರುವ ಕರೆ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಘಟನೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಬೋನಸ್ ಐರಿಸ್ ಪೊಲೀಸರು, ಲಿಯಾಮ್ ಅವರು ಕಾಸಾ ಸರ್ ಹೋಟೆಲ್ನ ಮೂರನೇ ಮಹಡಿಯ ತನ್ನ ಕೋಣೆಯ ಬಾಲ್ಕನಿಯಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಳಗೆ ಹಾರಿದ ಕೂಡಲೇ ಲಿಯಾಮ್ ಸಾವನ್ನಪ್ಪಿದ್ದಾರೆ. ‘ಸಂಜೆ ಐದು ಗಂಟೆ ವೇಳೆಗೆ ಘಟನೆ ನಡೆದಿದ್ದು, ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿದರು ಆ ವೇಳೆಗಾಗಲೆ ಲಿಯಾಮ್ ನಿಧನ ಹೊಂದಿದ್ದರು. ಆತ ಬಹಳ ಒರಟು ಹಾಗೂ ಮಾದಕ ದ್ರವ್ಯ ವ್ಯಸನಿಯಾಗಿದ್ದ, ಮಾದಕ ವಸ್ತು ಸೇವಿಸಿಯೇ ಆತ ಈ ಕೃತ್ಯ ಎಸಗಿಕೊಂಡಿದ್ದಾನೆ’ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಅಸಲಿಗೆ ಲಿಯಾಮ್, ನಿಧನ ಹೊಂದುವುದಕ್ಕೂ ಕೆಲ ಸಮಯ ಮುಂಚೆ ಕಾಸಾ ಸರ್ ಹೋಟೆಲ್ನ ಮ್ಯಾನೇಜರ್ ಸ್ಥಳೀಯ ಪೊಲೀಸರಿಗೆ ಕರೆ ಮಾಡಿ ‘ನಮ್ಮ ಹೋಟೆಲ್ ನಲ್ಲಿರುವ ವ್ಯಕ್ತಿ ಬಹಳ ಗಲಾಟೆ ಮಾಡುತ್ತಿದ್ದಾನೆ, ಹೋಟೆಲ್ನ ವಸ್ತುಗಳನ್ನು ಹಾಳು ಮಾಡುತ್ತಿದ್ದಾನೆ, ಸಿಬ್ಬಂದಿ ಮೇಲೆ ಹಲ್ಲೆ ಮಾಡುತ್ತಿದ್ದಾನೆ, ನೀವು ಈಗಲೇ ಇಲ್ಲಿಗೆ ಬನ್ನಿ’ ಎಂದು ಮಾತನಾಡಿದ್ದಾರೆ. ಈ ಕರೆ ದಾಖಲಾಗಿದೆ. ಕೆಲವರ ಆರೋಪದ ಪ್ರಕಾರ ಪೊಲೀಸರು ಬಂದು ಬೆದರಿಸಿದ್ದರಿಂದಲೇ ಲಿಯಾಮ್ ಬಾಲ್ಕನಿಯಿಂದ ಕೆಳಗೆ ಹಾರಿದ್ದಾರೆ ಎನ್ನಲಾಗುತ್ತಿದೆ.
ಲಿಯಾಮ್, ತಾನು ಮದ್ಯವ್ಯಸನದ ಸಮಸ್ಯೆಯಿಂದ ಬಳಲುತ್ತಿರುವುದಾಗಿ ಈ ಹಿಂದೆ ಹೇಳಿಕೊಂಡಿದ್ದರು. 2023 ರಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದ ಲಿಯಾಮ್, ‘ಮದ್ಯವ್ಯಸನದಿಂದ ಸಮಸ್ಯೆ ಅನುಭವಿಸುತ್ತಿದ್ದೆ. ಚಿಕಿತ್ಸೆ ಬಳಿಕ ಕಳೆದ ಆರು ತಿಂಗಳಿನಿಂದಲೂ ನಾನು ಮದ್ಯ ಸೇವಿಸಿಲ್ಲ’ ಎಂದಿದ್ದರು. ಆದರೆ ಈಗ ಹಠಾತ್ತನೆ ಮದ್ಯ ಹಾಗೂ ಮಾದಕ ವಸ್ತು ಸೇವಿಸಿ ಲಿಯಾಮ್ ನಿಧನ ಹೊಂದಿದ್ದಾರೆ ಎಂಬುದನ್ನು ಸಹ ಅಭಿಮಾನಿಗಳಿಗೆ ನಂಬಲು ಸಾಧ್ಯವಾಗುತ್ತಿಲ್ಲ.