ವಿದ್ಯುತ್ ಸ್ಪರ್ಶಕ್ಕೆ ಹೆಣ್ಣು ಚಿರತೆ ಸಾವನ್ನಪ್ಪಿದ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಸೀಗೇವಾಡಿ ಗ್ರಾಮದ ಬಳಿ ಜರುಗಿದೆ.
ರೈತರೊಬ್ಬರ ಜಮೀನಿನ ಬಳಿ ಮರದಿಂದ ಕೆಳಗೆ ಜಿಗಿಯುವಾಗ ಚಿರತೆಗೆ ವಿದ್ಯುತ್ ಸ್ಪರ್ಶವಾಗಿದೆ.
ತಕ್ಷಣವೇ ಮರದ ಬಳಿಯಿದ್ದ ವಿದ್ಯುತ್ ತಂತಿ ತಗುಲಿ ದುರ್ಘಟನೆ ಸಂಭವಿಸಿದೆ.
ಸೀಗೇವಾಡಿ ಗ್ರಾಮದ ಕಲ್ಲಿಗಣಸ್ವಾಮಿಗೆ ಎಂಬ ರೈತರಿಗೆ ಸೇರಿದ ಸ.ನಂ 202/3 ರಲ್ಲಿ ಘಟನೆ ಜರುಗಿದೆ. ಸುಮಾರು 6 ತಿಂಗಳ ಹೆಣ್ಣು ಚಿರತೆ ಸಾವನ್ನಪ್ಪಿದ್ದು, ಘಟನಾ ಸ್ಥಳಕ್ಕೆ ಬಂಡೀಪುರ ಹುಲಿ ಯೋಜನೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ನಿರ್ದೇಶಕ ಪ್ರಭಾಕರನ್, ಗುಂಡ್ಲುಪೇಟೆ ಬಫರ್ ಜೋನ್ ವಲಯ ಅರಣ್ಯಾಧಿಕಾರಿ ಬಿ.ಎಂ. ಮಲ್ಲೇಶ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಅರಣ್ಯ ಇಲಾಖೆ ಪಶು ವೈದ್ಯ ಡಾ.ಮಿರ್ಜಾ ವಾಸೀಂ ಚಿರತೆಯ ಮರಣೋತ್ತರ ಪರೀಕ್ಷೆ ರವಾನಿಸಲಾಗಿದ್ದು, ಬಳಿಕ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಮದ್ದೂರು ವಲಯದ ಹೊಸಕೆರೆ ಕಾರೇಮಾಳ ಅರಣ್ಯ ಪ್ರದೇಶದಲ್ಲಿ ಸುಡಲಾಯಿತು. ಈ ವೇಳೆ ಗೌರವ ವನ್ಯ ಜೀವಿ ಪರಿಪಾಲಕ ನಕುಲ್, ಉಪ ವಲಯ ಅರಣ್ಯಾಧಿಕಾರಿ ಭರತ್ ಜಿ.ಪಿ ಇದ್ದರು. ಕಳೆದ 15 ದಿನಗಳ ಹಿಂದೆಯಷ್ಟೆ ನೇನೇಕಟ್ಟೆಯ ಬಳಿ ಮರವೇರಿದ ಚಿರತೆ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿತ್ತು.
15 ದಿನದಲ್ಲಿ ಎರಡನೆ ಚಿರತೆ ವಿದ್ಯುತ್ ಗೆ ಸಿಲುಕಿ ಸಾವನ್ನಪ್ಪಿದ ಘಟನೆಯಾಗಿದೆ