ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ 37 ವರ್ಷಗಳಿಂದ ಜೈಲಿನಲ್ಲಿದ್ದ ವ್ಯಕ್ತಿ ನಿರ್ದೋಷಿ ಎಂದು ಸಾಬೀತಾದ ಹಿನ್ನೆಲೆಯಲ್ಲಿ ಆತನನ್ನು ತಕ್ಷಣವೇ ಬಿಡುಗಡೆಗೊಳಿಸಿ 14 ದಶಲಕ್ಷ ಡಾಲರ್ ಪರಿಹಾರ ನೀಡುವಂತೆ ಅಮೆರಿಕದ ಫ್ಲೋರಿಡಾ ರಾಜ್ಯದ ನ್ಯಾಯಾಲಯ ಆದೇಶ ಹೊರಡಿಸಿದೆ.
ಫ್ಲೋರಿಡಾದ ತಾಂಪಾ ನಗರದಲ್ಲಿ 1983ರಲ್ಲಿ 19 ವರ್ಷದ ಬಾರ್ಬರಾ ಗ್ರಾಮ್ಸ್ ಎಂಬ ಯುವತಿಯ ಮೇಲೆ ಅತ್ಯಾಚಾರ ಮತ್ತು ಕೊಲೆ ನಡೆದಿತ್ತು. ಪ್ರಕರಣದ ಸಂಬಂಧ 18 ವರ್ಷದ ರಾಬರ್ಟ್ ಡ್ಯುಬೋಯ್ಸ್ ಎಂಬ ವ್ಯಕ್ತಿಯನ್ನು ಬಂಧಿಸಿದ್ದು ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಆ ಬಳಿಕ ಅದನ್ನು ಜೀವಾವಧಿ ಶಿಕ್ಷೆಗೆ ಇಳಿಸಲಾಗಿತ್ತು.
2018ರಲ್ಲಿ `ಇನೊಸೆನ್ಸ್ ಪ್ರೊಜೆಕ್ಸ್ ಆರ್ಗನೈಸೇಷನ್’ ಎಂಬ ಎನ್ಜಿಒ ಸಂಸ್ಥೆ ಈ ಪ್ರಕರಣದ ಮರು ತನಿಖೆಗೆ ನಡೆಸಿದ ಪ್ರಯತ್ನದ ಫಲವಾಗಿ ನ್ಯಾಯಾಧಿಕಾರಿಗಳು ಡಿಎನ್ಎ ಪರೀಕ್ಷೆಗೆ ಆದೇಶಿಸಿದರು. 1983ರಲ್ಲಿ ಡಿಎನ್ಎ ಪರೀಕ್ಷೆಯ ಕ್ರಮ ಆರಂಭವಾಗಿರಲಿಲ್ಲ ಮತ್ತು ಸಂತ್ರಸ್ತೆಯ ದೇಹದ ಮೇಲಿನ ಗಾಯದ ಗುರುತು ಹಾಗೂ ಆರೋಪಿಯ ಹಲ್ಲಿನ ಗುರುತು ಒಂದಕ್ಕೊಂದು ಹೋಲುತ್ತದೆ ಎಂಬ ಆಧಾರದಲ್ಲಿ ಶಿಕ್ಷೆ ಘೋಷಿಸಿರುವುದು ಸರಿಯಲ್ಲ ಎಂದು ಎನ್ಜಿಒ ಸಂಸ್ಥೆ ವಾದಿಸಿತ್ತು. ಈ ಪ್ರಕಾರ 2020ರಲ್ಲಿ ಡ್ಯುಬೋಯ್ಸ್ ನಿರಪರಾಧಿ ಎಂದು ಸಾಬೀತಾಗಿ ಜೈಲಿನಿಂದ ಬಿಡುಗಡೆಗೊಂಡಿದ್ದ.
ಮಾಡದ ತಪ್ಪಿಗೆ 37 ವರ್ಷ ಜೈಲಿನಲ್ಲಿ ಕಳೆದಿದ್ದ ಡ್ಯುಬೋಯ್ಸ್, ಪರಿಹಾರ ಕೋರಿ ಪ್ರಕರಣದ ತನಿಖೆ ನಡೆಸಿದ್ದ ಪೊಲೀಸ್ ಇಲಾಖೆ, ವಿಧಿವಿಜ್ಞಾನ ಇಲಾಖೆಯ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದ. 2014ರ ಜನವರಿ 11ರಂದು ಈ ಪ್ರಕರಣವನ್ನು ರಾಜಿಯಲ್ಲಿ ಮುಗಿಸಲು ಎರಡೂ ಕಡೆಯವರು ಸಮ್ಮತಿಸಿದ್ದರು. ಇದೀಗ 59 ವರ್ಷವಾಗಿರುವ ಡ್ಯುಬೋಯ್ಸ್ಗೆ 14 ದಶಲಕ್ಷ ಡಾಲರ್ ಪರಿಹಾರ ನೀಡಲು ತಾಂಪಾ ನಗರಾಡಳಿತ ಒಪ್ಪಿಕೊಂಡಿದೆ.