ಭೋಪಾಲ್: ಮಹಿಳೆಯೊಬ್ಬರನ್ನು ಎಳೆದಾಡಿ, ಜುಟ್ಟು ಹಿಡಿದು ಗುಂಪೊಂದು ಥಳಿಸಿದ ಘಟನೆ ಮಧ್ಯಪ್ರದೇಶದ ಸಾಗರ್ ನಲ್ಲಿ (Madhyapradesh) ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ. ಮಹಿಳೆಯನ್ನು ಬಸ್ ನಿಲ್ದಾಣದಲ್ಲಿ ಗುಂಪು ಎಳೆದಾಡುತ್ತಿರುವುದು ಹಾಗೂ ಪಕ್ಕದಲ್ಲಿ ಕಂದಮ್ಮ ಇರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (Social Media) ಸಖತ್ ವೈರಲ್ ಆಗಿದೆ.
ವೈರಲ್ ವಿಡಿಯೋದಲ್ಲಿ ಮಹಿಳೆಯನ್ನು (Woman) ಎಳೆದುಕೊಂಡು ಬಂದು ಹಲ್ಲೆ ನಡೆಸುವುದು, ಥಳಿಸುವುದನ್ನು ಕಾಣಬಹುದಾಗಿದೆ. ಈ ವೇಳೆ ಮಹಿಳೆಯು, ಸಹೋದರರೇ ನನ್ನನ್ನು ಬಿಟ್ಟುಬಿಡಿ ಎಂದು ಅಂಗಲಾಚುವುದನ್ನು ನೋಡಿದರೆ ನಿಮ್ಮ ಕರುಳು ಚುರುಕ್ ಅನ್ನದೆ ಇರಲಾರದು. ಮಹಿಳೆ ಬೇಡಿಕೊಂಡರೂ ಗುಂಪು ಮಾತ್ರ ಆಕೆ ಮೇಲೆ ಹಲ್ಲೆ ನಡೆಸುವುದನ್ನು ಮುಂದುವರಿಸಿದೆ. ಇಷ್ಟು ಮಾತ್ರವಲ್ಲದೆ 5 ತಿಂಗಳ ಮಗುವಿನೊಂದಿಗೆ ಅಲೆದಾಡುತ್ತಿದ್ದ,
ಈ ಮಹಿಳೆ ಸಹೋದರ ದಯವಿಟ್ಟು ನನ್ನ ಕುಟುಂಬವನ್ನು ಹುಡುಕಲು ನನಗೆ ಸಹಾಯ ಮಾಡಿ ಎಂದು ಅಳುತ್ತಿರುವುದು ಕೂಡ ವೀಡಿಯೋದಲ್ಲಿ ಗಮನಿಸಬಹುದಾಗಿದೆ. ಮಧ್ಯಪ್ರದೇಶ ಪ್ರದೇಶ ಕಾಂಗ್ರೆಸ್ ಸಮಿತಿ ಈ ವೀಡಿಯೋವನ್ನು ಪೋಸ್ಟ್ ಮಾಡಿದೆ. ಗೋಪಾಲ್ಗಂಜ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಈ ಕುರಿತು ತನಿಖೆಯನ್ನು ಪ್ರಾರಂಭಿಸಿದ್ದಾರೆ. ಘಟನೆ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಇತರರ ಬಂಧನಕ್ಕೆ ಬಲೆ ಬೀಸಲಾಗಿದೆ.