ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ನೆಚ್ಚಿನ ಓಟಗಾರರನ್ನು ಹಿಂದೆಹಾಕಿ 200 ಮೀ. ಓಟದಲ್ಲಿ ಚಿನ್ನದ ಪದಕ ಗೆದ್ದ ಲೆಟ್ಸಿಲೆ ಟೆಬಾಗೊ ಅವರನ್ನು ಸ್ವಾಗತಿಸಲು ಬೋಟ್ಸ್ವಾನಾದಲ್ಲಿ ಮಂಗಳವಾರ ಅರ್ಧದಿನ ರಜೆ ಘೋಷಣೆ ಮಾಡಲಾಗಿತ್ತು.
21 ವರ್ಷ ವಯಸ್ಸಿನ ಟೆಬಾಗೊ ಆಗಸ್ಟ್ 8ರಂದು ಅಮೆರಿಕದ ಕೆನ್ನಿ ಬೆಡ್ನಾರೆಕ್ ಮತ್ತು ನೊವಾ ಲೈಲ್ಸ್ ಅವರಂತಹ ಖ್ಯಾತ ಓಟಗಾರರನ್ನು ಹಿಮ್ಮೆಟ್ಟಿಸಿ ಪ್ಯಾರಿಸ್ ಒಲಂಪಿಕ್ ನಲ್ಲಿ ಚಿನ್ನಕ್ಕೆ ಪದಕಕ್ಕೆ ಕೊರಳೊಡ್ಡಿದ್ದರು.
ಲೆಟ್ಸಿಲೆ ಟೆಬಾಗೊ ಸ್ಪರ್ಧೆಯಲ್ಲಿ 19.46 ಸೆಕೆಂಡುಗಳಲ್ಲಿ ಗುರಿ ತಲುಪಿದ್ದು, ಇದು ಆಫ್ರಿಕಾದ ದಕ್ಷಿಣಭಾಗದ ದೇಶಕ್ಕೆ ಮೊದಲ ಚಿನ್ನವಾಗಿತ್ತು.
ಪ್ಯಾರಿಸ್ ಒಲಿಂಪಿಕ್ಸ್ನ 200 ಮೀ.ಓಟದ ಸ್ಪರ್ಧೆಯಲ್ಲಿ ಚಿನ್ನದ ಗೆದ್ದು ಈ ವಿಭಾಗದಲ್ಲಿ ದೇಶಕ್ಕೆ ಮೊದಲ ಬಾರಿಗೆ ಚಿನ್ನದ ಪದಕ ತಂದುಕೊಟ್ಟ ಲೆಟ್ಸಿಲೆ ಟೆಬಾಗೊ ಸ್ವಾಗತಕ್ಕೆ ಅಲ್ಲಿನ ಜನತೆ ಸಜ್ಜಾಗಿದ್ದರು. ಹೀಗಾಗಿ ಬೋಟ್ಸ್ವಾನಾದ ಅಧ್ಯಕ್ಷ ಮೊಕ್ಗ್ವಿಟ್ಸಿ ಮಸಿಸಿ ಅವರು ಮಂಗಳವಾರ ಮಧ್ಯಾಹ್ನ ನಂತರ ಅರ್ಧದಿನ ರಜೆ ಘೋಷಣೆ ಮಾಡಿದ್ದರು.
ಬೊಟ್ಸ್ವಾನಾದ ಒಲಿಂಪಿಕ್ ತಂಡವು ಮಂಗಳವಾರ ಟೆಬೊಗೊ ಗೆದ್ದ ಚಿನ್ನದ ಜೊತೆಗೆ ಪುರುಷರ 4×400 ಮೀ ರಿಲೆಯಲ್ಲಿ ಬೆಳ್ಳಿ ಪದಕದೊಂದಿಗೆ ಸ್ವದೇಶಕ್ಕೆ ಮರಳಿತ್ತು. ಈ ಎರಡು ಪದಕಗಳೊಂದಿಗೆ ದೇಶ ಗೆದ್ದ ಒಟ್ಟು ಒಲಿಂಪಿಕ್ ಪದಕಗಳ ನಾಲ್ಕಕ್ಕೆ ಏರಿಕೆಯಾಗಿದೆ.