ಬೆಂಗಳೂರು ;- ಹಿಂದುತ್ವವಾದಿ ವ್ಯಕ್ತಿ ಪ್ರತಿಪಕ್ಷ ನಾಯಕ ಆಗಬೇಕು ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.
ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಹಿಂದುತ್ವವಾದಿ, ಯಾವುದೇ ಹೊಂದಾಣಿಕೆಗೂ ಬಗ್ಗದ ವ್ಯಕ್ತಿ ಪ್ರತಿಪಕ್ಷ ನಾಯಕನಾಗಬೇಕು. ಬಿಜೆಪಿಯಲ್ಲಿ ಈಗ ಟರ್ನಿಂಗ್ ಪಾಯಿಂಟ್ ಆಗುತ್ತಿದೆ. ನಾವು ಈ ಬಾರಿ ಅಂಕಿ-ಅಂಶಗಳಲ್ಲಿ ಸೋತಿದ್ದೇವೆಯೇ ವಿನಃ ಪರ್ಸೇಂಟೇಜ್ ನಲ್ಲಿ ಅಲ್ಲ, ಇಡೀ ಹಿಂದುತ್ವದ ಮೂಲಕ ಬಿಜೆಪಿ ಹಾಗೂ ಸಂಘಟನೆ ಬೆಳೆದಿದೆ. ಇದರ ಆಧಾರದ ಮೇಲೆಯೇ ಪ್ರತಿಪಕ್ಷ ನಾಯಕನ ಆಯ್ಕೆಯಾಗುತ್ತದೆ ಎಂದು ಹೇಳಿದರು.
ರಾಜ್ಯಾಧ್ಯಕ್ಷರ ನೇಮಕ ಯಾವಾಗ ಆಗುತ್ತದೆಯೋ ಗೊತ್ತಿಲ್ಲ, ಶಾಸಕರಿಂದ ಅಭಿಪ್ರಾಯ ಸಂಗ್ರಹಿಸಿ ಪ್ರತಿಪಕ್ಷ ನಾಯಕನ ಆಯ್ಕೆಯಾಗುತ್ತದೆ. ರಾಜ್ಯಾಧ್ಯಕ್ಷ ಸ್ಥಾನಕ್ಕೂ ಶೀಘ್ರವೇ ನೇಮಕ ಆಗುತ್ತದೆ. ಹೀಗಾಗಿ ನೇಮಕ ಆಗುವ ಇಬ್ಬರಿಗೂ ಚಾಲೆಂಜ್ ಇದೆ, ಇಬ್ಬರಿಗೂ ರಾಜ್ಯಾದ್ಯಂತ ಓಡಾಡಿ ಪಕ್ಷವನ್ನು ಬರುವ ಚುನಾವಣೆಯಲ್ಲಿ ಗೆಲ್ಲಿಸುವ ಹೊಣೆ ಇದೆ ಎಂದು ಅಭಿಪ್ರಾಯ ತಿಳಿಸಿದರು.
ಇನ್ನೂ ಮಹಿಳೆಯರು ಯಾಕೆ ಬಿಜೆಪಿ ರಾಜ್ಯಾಧ್ಯಕ್ಷರು ಆಗಬಾರದು..? ಎಲ್ಲ ಕಡೆಯೂ ಮಹಿಳೆಯರು ಇರಬೇಕು ಹಾಗೆಯೇ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಮಹಿಳೆಯರು ಇರಬೇಕು. ಈಗಾಗಲೇ ರಾಜ್ಯಾಧ್ಯಕ್ಷ ಸ್ಥಾನಕ್ಕೂ ಆಯ್ಕೆ ನಡೆಯುತ್ತಿದೆ. ರಾಜ್ಯಾಧ್ಯಕ್ಷರು ಯಾರಾಗಬೇಕೆಂದು ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಯಾರೇ ಆದರೂ ಅವರ ಜೊತೆ ನಾವು ಒಟ್ಟಾಗಿ ಹೋಗುತ್ತೇವೆ ಎಂದು ಬಿಜೆಪಿ ಕಚೇರಿಯಲ್ಲಿ ಶಶಿಕಲಾ ಜೊಲ್ಲೆ ಸ್ಪಷ್ಟಪಡಿಸಿದರು.