ಬೆಂಗಳೂರು : ಕಾಂಕ್ರೀಟ್ ಸಿಟಿ, ಉದ್ಯಾನ ನಗರಿ, ಸಿಲಿಕಾನ್ ಸಿಟಿ, ಮೆಟ್ರೋ ಸಿಟಿ(Metro City) ಎಂದು ಕರೆಯುವ ಬೆಂಗಳೂರು ಈಗ ಹಾವಿನ ನಗರ ಎಂದು ಕರೆಯಬಹುದು. ಏಕೆಂದರೆ ಕೇವಲ ಚಿಕ್ಕದಾದ ಹಾವುಗಳು, ಕೋತಿ, ನವಿಲು ಸೇರಿ ಇತರೆ ಪಕ್ಷಿಗಳು ಮಾತ್ರ ಕಂಡುಬರುತ್ತಿದ್ದವು. ಆದರೆ, ಈಗ ಬರೋಬ್ಬರಿ 7 ಅಡಿ ಉದ್ದದ ಬೃಹತ್ ಹೆಬ್ಬಾವು(A giant python of 7 feet length) ಪತ್ತೆಯಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಬೆಂಗಳೂರು ನಗರ ಪ್ರದೇಶದ ವ್ಯಾಪ್ತಿಯಲ್ಲಿ ಬಿಬಿಎಂಪಿ ಅರಣ್ಯ ಘಟಕದ ವತಿಯಿಂದ ವನ್ಯಜೀವಿ ಸಂರಕ್ಷಣಾ ತಂಡದ ಸಿಬ್ಬಂದಿಗೆ ಈ ಹೆಬ್ಬಾವು ಸಿಕ್ಕಿದ್ದು,
ಅದನ್ನು ಸಂರಕ್ಷಣೆ ಮಾಡಿದ್ದಾರೆ. ವನ್ಯಜೀವಿಗಳು ಹಾಗೂ ವನ್ಯ ಪ್ರಾಣಿಗಳಿಂದ ಸಾರ್ವಜನಿಕರಿಗೆ ಆಗುವ ತೊಂದರೆಯನ್ನು ನಿವಾರಿಸುವ ನಿಟ್ಟಿನಲ್ಲಿ ವನ್ಯಜೀವಿ ಸಂರಕ್ಷಣೆಯ ಕುರಿತು (ಹಾವುಗಳು, ಕೋತಿ, ಪಕ್ಷಿಗಳು ಹಾಗೂ ಇತರೆ) ಸಾರ್ವಜನಿಕರಿಂದ ಬರುವ ದೂರುಗಳಿಗೆ ಅನುಗುಣವಾಗಿ ಕ್ರಮ ಕೈಗೊಳ್ಳಲಾಗುತ್ತಿರುತ್ತದೆ. ಈಗ ದೂರು ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ಮಾಡಿದ ತಂಡ ಈ ಬೃಹತ್ ಗಾತ್ರದ ಹೆಬ್ಬಾವನ್ನು ರಕ್ಷಣೆ ಮಾಡಿದ್ದು, ಕಾಡಿಗೆ ಬಿಡಲು ಮುಂದಾಗಿದೆ.
ಬೃಹತ್ ಹೆಬ್ಬಾವು ನೋಡಿ ಆತಂಕಗೊಂಡ ಸಾರ್ವಜನಿಕರು: ಮಂಗಳವಾರ (ಏ.25) ಬೆಳಗಿನ ಜಾವ ಸುಮಾರು 2.30ರ ವೇಳೆಗೆ ಬೆಂಗಳೂರಿನ ಕುಂಬತ್ತಹಳ್ಳಿ ಬಳಿಯಿರುವ ಅಂಜನಾಪುರ ನಿವಾಸಿ ರಾಹಿದಾಸ್ ಎನ್ನುವವರು ಇಲ್ಲಿ ಹೆಬ್ಬಾವೊಂದು ಇರುವುದಾಗಿ ಬಿಬಿಎಂಪಿ ವನ್ಯಜೀವಿ ಸಂರಕ್ಷಣಾ ತಂಡದ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಈ ವಿಚಾರ ತಿಳಿದ ಕೂಡಲೇ ಬಿಬಿಎಂಪಿ ಅರಣ್ಯ ವಿಭಾಗದ ವನ್ಯಜೀವಿ ಸಂರಕ್ಷಕರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಆಗ ಪತ್ತೆಯಾದ ಅಂದಾಜು 6 ರಿಂದ 7 ಅಡಿ ಉದ್ದದ ಇಂಡಿಯನ್ ರಾಕ್ ಪೈತಾನ್ ಹೆಬ್ಬಾವನ್ನು ಪ್ರಸನ್ನ ಕುಮಾರ್ ಪ್ರಾಣಿ ಕಲ್ಯಾಣ ಪರಿಪಾಲಕ ಹಿಡಿದು ಸಂರಕ್ಷಣೆ ಮಾಡಿದ್ದಾರೆ. ಈ ಹೆಬ್ಬಾವನ್ನು ಸೂಕ್ತ ಆವಾಸ ಸ್ಥಾನಕ್ಕೆ ಬಿಡಲಾಗಿದೆ.
ಬೇಸಿಗೆಯಲ್ಲಿ ಹಾವುಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ: ಮಳೆಗಾಲ ಮತ್ತು ಚಳಿಗಾಲದಲ್ಲಿ ಮಣ್ಣಿನಲ್ಲಿರುವ ಸಂದುಗಳು, ಬಿಲಗಳು, ಚರಂಡಿಯ ಪೊಟರೆಗಳು, ಕಲ್ಲುಹಾಸುಗಳ ನಡುವೆ ಹಾವುಗಳು ಅವಿತುಕೊಂಡಿರುತ್ತವೆ. ಇನ್ನು ಮಣ್ಣಿನ ಬಿಲದಲ್ಲಿವೇ ಹೆಚ್ಚಾಗಿ ಹಾವುಗಳು ವಾಸ ಮಾಡುತ್ತವೆ. ಹಾವುಗಳಿಗೆ ಇಲಿ, ಹಲ್ಲಿ, ಹೆಗ್ಗಣ, ಅಳಿಲು ಪಕ್ಷಿಗಳು ಸೇರಿ ಅನೇಕ ಪ್ರಾಣಿ ಪಕ್ಷಿಗಳು ಪ್ರಮುಖ ಆಹಾರವಾಗಿವೆ. ಆದರೆ, ಈಗ ಬೇಸಿಗೆ ಇರುವ ಹಿನ್ನೆಲೆಯಲ್ಲಿ ತಾಪಮಾನ ಹೆಚ್ಚಾಗಿರುವ ಕಾರಣ ಹಾವುಗಳು ಬಿಲ ಹಾಗೂ ಕಲ್ಲಿನ ಪೊಟರೆಗಳಿಂದ ಹೊರಗೆ ಬರುವುದು ಸಾಮಾನ್ಯವಾಗಿದೆ.
ಬಿಬಿಎಂಪಿ ಸಹಾಯವಾಣಿಗೆ ಕರೆ ಮಾಡಿ: ಹಾವುಗಳು ಹೊರಗೆ ಬಂದಾಗ ಸಾರ್ವಜನಿಕರು ಅವುಗಳಿಗೆ ಹಾನಿಯುಂಟುಮಾಡಬಾರದು. ಹಾವುಗಳು ಕಂಡುಬಂದಲ್ಲಿ ಬಿಬಿಎಂಪಿ ಅರಣ್ಯ ವಿಭಾಗದ ವನ್ಯಜೀವಿ ತಂಡಗಳಿಗೆ ಕರೆ ಮಾಡಿ ಸಂರಕ್ಷಣೆ ಮಾಡಲು ಕೇಳಬಹುದು. ನಂತರ ಸಿಬ್ಬಂದಿ ಬಂದು ಹಾವನ್ನು ಸಂರಕ್ಷಣೆ ಮಾಡಿ, ಸೂಕ್ತ ಆವಾಸ ಸ್ಥಾನಕ್ಕೆ ಬಿಡಲು ಸಾರ್ವಜನಿಕರುಗಳು ಅನುವು ಮಾಡಿಕೊಡಬೇಕೆಂದು ಬಿಬಿಎಂಪಿ ವನ್ಯಜೀವಿ ಸಂರಕ್ಷಣಾ ಅಧಿಕಾರಿಗಳು ಮನವಿ ಮಾಡಿದ್ದಾರೆ. ಸಾರ್ವಜನಿಕರು ಬಿಬಿಎಂಪಿ ಸಹಾಯವಾಣಿ 080-22221188 ಕರೆ ಮಾಡಬೇಕು ಎಂದು ಬಿಬಿಎಂಪಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಸರಿನಾ ಸಿಕ್ಕಲಿಗರ್ ತಿಳಿಸಿದ್ದಾರೆ.