ಬೆಂಗಳೂರು: ಇಡೀ ದೇಶವೇ ರಾಮನ ಪ್ರಾಣಪ್ರತಿಷ್ಠೆ ಕಾರ್ಯಕ್ರಮಕ್ಕಾಗಿ ಕಾದು ಕುಳಿತಿದೆ. ರಾಮನಾಮದ ಜಪ ಎಲ್ಲ ಕಡೆ ಜೋರಾಗಿದೆ. ರಾಮ ಎಂಬ ಎರಡಕ್ಷರ ಹೊಸದೊಂದು ಅನುಭವ ನೀಡುತ್ತಿದೆ. ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣಪ್ರತಿಷ್ಠೆಗೆ ಸಕಲ ಸಿದ್ಧತೆ ನಡೆಯುತ್ತಿದ್ದರೆ ಇತ್ತ ಬೆಂಗಳೂರಿನಲ್ಲಿ ಬೃಹತ್ ರಾಮನ ಮೂರ್ತಿ ಜನರನ್ನ ಆಕರ್ಷಿಸುತ್ತಿದೆ.
ಸೋಮವಾರ ಐತಿಹಾಸಿಕ ಬಾಲರಾಮನ ಪ್ರತಿಷ್ಠಾಪನೆಗೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ಈಗಾಗಲೇ ಕನ್ನಡಿಗ ಅರುಣ್ ಯೋಗಿರಾಜ್ ಕೆತ್ತಿರೋ ಬಾಲರಾಮನ ವಿಗ್ರಹ ಮಂದಿರ ಸೇರಿದ್ದು, ಪ್ರಾಣಪ್ರತಿಷ್ಠಾಪನೆಯ ಕಾರ್ಯ ಸೋಮವಾರ ನಡೆಯಲಿದೆ. ಅಂದಿನ ಈ ವಿಜೃಂಭಣೆಯ ಐತಿಹಾಸಿಕ ಕ್ಷಣಕ್ಕಾಗಿ ಇಡೀ ಭಾರತವೇ ಕಾತುರದಿಂದ ಕಾಯುತ್ತಿದೆ
ಇನ್ನು ಸಿಲಿಕಾನ್ ಸಿಟಿಯ ಹೃದಯ ಭಾಗದಲ್ಲಿ 15 ಅಡಿಯ ಬೃಹತ್ ರಾಮನ ಫೈಬರ್ ಮೂರ್ತಿ ನೆಲೆ ನಿಂತಿದ್ದಾನೆ. ಹೌದು, ನೀಲಾಕಾರನಾಗಿ ಕಲಾವಿದರ ಕೈಯಲ್ಲಿ ಮೂಡಿರುವ ರಾಮನ ಮೂರ್ತಿ ಮೈಸೂರು ಬ್ಯಾಂಕ್ ಸರ್ಕಲ್ನಲ್ಲಿರುವ ಆಂಜನೇಯ ದೇವಾಲಯದ ಹೊರಗೆ ಬರುವ ಜನರಿಗೆ ದರ್ಶನ ನೀಡುತ್ತಿದ್ದಾನೆ.