ಭೋಪಾಲ್: ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಚಿರತೆಯೊಂದು ಮೂರು ಮರಿಗಳಿಗೆ ಜನ್ಮ ನೀಡಿದೆ. ಈ ಸಂಬಂಧ ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಜ್ವಾಲಾ ಎಂಬ ಹೆಸರಿನ ಚಿರತೆ ಮೂರು ಮರಿಗಳಿಗೆ ಜನ್ಮ ನೀಡಿದೆ.
ಕೆಲ ವಾರಗಳ ಹಿಂದೆಯಷ್ಟೇ ನಮೀಬಿಯಾದ ಚಿರತೆ ಆಶಾ ತನ್ನ ಮರಿಗಳಿಗೆ ಜನ್ಮ ನೀಡಿತ್ತು ಎಂದು ಹೇಳಿದ್ದಾರೆ. ಚಿರತೆ ಮರಿಗಳ ವಿಡಿಯೋವನ್ನು ಕೂಡ ಸಚಿವರು ಪೋಸ್ಟ್ ಮಾಡಿದ್ದಾರೆ. ಕೇಂದ್ರ ಸಚಿವರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡುತ್ತಿದ್ದಂತೆಯೇ ವನ್ಯಜೀವಿ ಪ್ರೇಮಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬಂತು. ಚೀತಾ ಸಂತತಿ ಇನ್ನಷ್ಟು ಹೆಚ್ಚಾಗಲಿ ಎಂದು ಆಶಿಸಿದರು.
ಚೀತಾ ಯೋಜನೆಯಡಿ ತಾಯಿ ಚಿರತೆ ಜ್ವಾಲಾ ಸೇರಿದಂತೆ 8 ಚಿರತೆಗಳನ್ನು 2022 ರ ಸೆಪ್ಟೆಂಬರ್ 17 ರಂದು ನಮೀಬಿಯಾದಿಂದ ತರಲಾಯಿತು. ಜನವರಿ 16 ರಂದು ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ನಮೀಬಿಯಾದ ಚಿರತೆ ಶೌರ್ಯ ಸಾವನ್ನಪ್ಪಿತ್ತು. ಮಾರ್ಚ್ 2023 ರಿಂದ ಶೌರ್ಯ ಸೇರಿದಂತೆ 7 ಚಿರತೆಗಳು ಮತ್ತು 3 ಮರಿಗಳು ಕೆಎನ್ಪಿಯಲ್ಲಿ ವಿವಿಧ ಕಾರಣಗಳಿಂದ ಸಾವನ್ನಪ್ಪಿವೆ. ಈ ಮೂಲಕ ಕುನೋದಲ್ಲಿ ಚಿರತೆಗಳ ಸಾವಿನ ಸಂಖ್ಯೆ 10ಕ್ಕೆ ಏರಿಕೆಯಾಗಿತ್ತು.