ಜೈಪುರ: ಜಮೀನು ವಿಚಾರವಾಗಿ ಎರಡು ಕುಟುಂಬಗಳ (Family) ನಡುವೆ ನಡೆದ ಗಲಾಟೆಯಲ್ಲಿ ವ್ಯಕ್ತಿಯೊಬ್ಬನನ್ನು ಆತನ ಸಹೋದರ ಟ್ರ್ಯಾಕ್ಟರ್ (Tractor) ಹರಿಸಿ ಬರ್ಬರವಾಗಿ ಕೊಂದಿರುವ ಘಟನೆ ರಾಜಸ್ಥಾನದ ಭರತ್ಪುರದಲ್ಲಿ (Rajasthan’s Bharatpur) ನಡೆದಿದೆ.
ಸಹೋದರ ನಿರ್ಪತ್ ಮೇಲೆ ಆರೋಪಿ ದಾಮೋದರ್ ಎಂಟು ಬಾರಿ ಟ್ರ್ಯಾಕ್ಟರ್ ಅನ್ನು ಹಿಂದಕ್ಕೆ ಮತ್ತು ಮುಂದಕ್ಕೆ ಓಡಿಸಿದ್ದಾನೆ. ಈಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಟ್ರ್ಯಾಕ್ಟರ್ ಓಡಿಸುತ್ತಿದ್ದಾಗ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದರೆ ಗ್ರಾಮದ ಇತರ ಜನರು ವಿಡಿಯೋ ಮಾಡುವುದರಲ್ಲಿ ಬ್ಯುಸಿಯಾಗಿದ್ದರು. ಘಟನೆಯ ನಂತರ ಗ್ರಾಮದಲ್ಲಿ ಉದ್ವಿಗ್ನತೆ ಉಂಟಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬಹದ್ದೂರ್ ಸಿಂಗ್ ಮತ್ತು ಅಥರ್ ಸಿಂಗ್ ಅವರ ಕುಟುಂಬಗಳು ಭರತ್ಪುರದ ತುಂಡು ಭೂಮಿಗೆ ಸಂಬಂಧಿಸಿದಂತೆ ದೀರ್ಘಕಾಲ ಜಗಳ ನಡೆಯುತ್ತಿತ್ತು. ಬುಧವಾರ ಬೆಳಗ್ಗೆ ಬಹದ್ದೂರ್ ಸಿಂಗ್ ಅವರ ಕುಟುಂಬ ಸದಸ್ಯರು ವಿವಾದಿತ ಜಾಗಕ್ಕೆ ಟ್ರ್ಯಾಕ್ಟರ್ನಲ್ಲಿ ಬಂದಿದ್ದಾರೆ. ಕೆಲಸ ಸಮಯದಲ್ಲಿ ಅಥರ್ ಸಿಂಗ್ ಅವರ ಕುಟುಂಬ ಸ್ಥಳಕ್ಕೆ ಬಂದಿದೆ.
ಎರಡು ಕುಟುಂಬಗಳು ಮುಖಾಮುಖಿಯಾದ ನಂತರ ಪರಸ್ಪರ ಘರ್ಷಣೆಗಿಳಿದು ಮತ್ತೊಬ್ಬರ ಮೇಲೆ ದೊಣ್ಣೆ, ಕಲ್ಲುಗಳಿಂದ ಹಲ್ಲೆ ನಡೆಸಿದ್ದಾರೆ. ಈ ವೇಳೆ ಅಥರ್ ಸಿಂಗ್ ಅವರ ಪುತ್ರ ನಿರ್ಪತ್ ನೆಲಕ್ಕೆ ಬಿದ್ದಿದ್ದಾರೆ. ಈ ವೇಳೆ ಆರೋಪಿ ದಾಮೋದರ್ ನಿರ್ಪತ್ ಪ್ರಾಣ ಹೋಗುವವರೆಗೂ 8 ಬಾರಿ ಟ್ರ್ಯಾಕ್ಟರ್ ಓಡಿಸಿದ್ದಾನೆ.
ಈ ಸಂದರ್ಭದಲ್ಲಿ ಕುಟುಂಬ ಸದಸ್ಯರು ಮಧ್ಯಪ್ರವೇಶಿಸಿದರೂ ದಾಮೋದರ್ ತಲೆ ಕೆಡಿಸಿಕೊಳ್ಳದೇ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಘರ್ಷಣೆಯಲ್ಲಿ ಸುಮಾರು 10 ಮಂದಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.