ಮುಂಬೈ: ವ್ಯಕ್ತಿಯೊಬ್ಬ ಅಪ್ರಾಪ್ತ ವಯಸ್ಸಿನ ಇಬ್ಬರು ಬಾಲಕರಿಗೆ ಚಾಕಲೇಟ್ ಆಸೆ ತೋರಿಸಿ ಅವರನ್ನು ಲೈಂಗಿಕವಾಗಿ ಬಳಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮುಂಬೈನ ವಿಲೆ ಪಾರ್ಲೆಯಲ್ಲಿ ಪೋಷಕರೊಂದಿಗೆ ವಾಸವಾಗಿರುವ 10 ಹಾಗೂ 12 ವರ್ಷದ ಸಹೋದರರು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ವಾಹನಗಳ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ ಆರೋಪಿ ತನ್ನ ನೆರೆಯ ಮನೆಯಲ್ಲಿ ವಾಸವಿದ್ದ ಈ ಬಾಲಕರ ಮನೆಗೆ ತೆರಳಿ, ಚಾಕಲೇಟ್ ನೀಡುವ ಮೂಲಕ ಮಕ್ಕಳನ್ನು ಆಕರ್ಷಿಸಿ ಲೈಂಗಿಕವಾಗಿ ದುರುಪಯೋಗ ಪಡಿಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣ ಶುಕ್ರವಾರ ಬೆಳಕಿಗೆ ಬಂದಿದ್ದು, ನಗರದ ಪಶ್ಚಿಮ ಸಂತಾಕ್ರೂಜ್ ನ ಶಾಲೆಯೊಂದರಲ್ಲಿ ಓದುತ್ತಿರುವ ಬಾಲಕರು ಶಾಲೆಯ ಶಿಕ್ಷಕರ ಬಳಿ ಈ ವಿಚಾರ ತಿಳಿಸಿದ್ದಾರೆ. ವಿಷಯ ತಿಳಿದ ಶಿಕ್ಷಕರು ಸಂತಾಕ್ರೂಜ್ನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಾದ ನಂತರ ಕೇಸನ್ನು ವಿಲೆ ಪಾರ್ಲೆ ಪೊಲೀಸ್ ಠಾಣಾ ವ್ಯಾಪ್ತಿಗೆ ವರ್ಗಾವಣೆ ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಲಕ್ಷ್ಮಣ್ ಚವಾಣ್ ತಿಳಿಸಿದ್ದಾರೆ.
ಆರೋಪಿಯು ಮಕ್ಕಳಿಗೆ ಚಾಕಲೇಟ್ ಆಸೆ ತೋರಿಸಿ ತಮ್ಮ ಮನೆಗೆ ಕರೆದುಕೊಂಡು ಹೋಗಿ ಒಬ್ಬನ ನಂತರ ಮತ್ತೊಬ್ಬನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಆದರೆ ಮಕ್ಕಳು ತಮ್ಮ ಪೋಷಕರ ಬಳಿ ಈ ವಿಚಾರ ತಿಳಿಸಿಲ್ಲ. ಪೊಲೀಸರು ಐಪಿಸಿ ಸೆಕ್ಷನ್ 377 ಲೈಂಗಿಕ ಅಪರಾಧದಿಂದ ಮಕ್ಕಳನ್ನು ರಕ್ಷಣೆ ಅನ್ವಯದಡಿ ಕೇಸನ್ನು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.