ಹರಿತವಾದ ಖಡ್ಗದಿಂದ ಅಪ್ರಾಪ್ತನನ್ನು ಕೊಂದು, ಹಲವರನ್ನು ಗಾಯಗೊಳಿಸಿದ್ದ 36 ವರ್ಷದ ವ್ಯಕ್ತಿಯನ್ನು ಕೊನೆಗೂ ಲಂಡನ್ ಮೆಟ್ರೋ ಪಾಲಿಟನ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಳಗಿನ ಹೊತ್ತು ಕಚೇರಿಗೆ ತೆರಳುವ ಒತ್ತಡದಲ್ಲಿದ್ದ ಜನರಿಗೆ ಈ ಘಟನೆ ಆಘಾತ ತಂದಿದೆ. ಕೂಡಲೇ ಪೊಲೀಸರಿಗೆ ಕರೆ ಮಾಡಿದ ಸಾರ್ವಜನಿಕರು ವ್ಯಕ್ತಿಯ ಬಗ್ಗೆ ಮಾಹಿತಿ ನೀಡಿದ್ದು ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿಯನ್ನು ಬಂಧಿಸುವ ಹೊತ್ತಿಗಾಗಲೇ ಆತ ತನ್ನ ಕತ್ತಿಯಿಂದ ಹಲವರ ಮೇಲೆ ದಾಳಿ ನಡೆಸಿದ್ದಷ್ಟೇ ಅಲ್ಲ, ತನ್ನನ್ನು ಬಂಧಿಸಲು ಬಂದಿದ್ದ ಇಬ್ಬರು ಪೊಲೀಸರ ಮೇಲೂ ದಾಳಿ ಮಾಡಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಈ ಘಟನೆಯಲ್ಲಿ ಒಟ್ಟು ಎಷ್ಟು ಮಂದಿಗೆ ಗಾಯವಾಗಿದೆ ಅನ್ನೋದ್ರ ಕುರಿತಾಗಿ ಇನ್ನಷ್ಟೇ ನಿಖರ ಮಾಹಿತಿ ಹೊರ ಬೀಳಬೇಕಿದೆ.
ಈ ಘಟನೆ ಕುರಿತಾಗಿ ಮಾಹಿತಿ ನೀಡಿರುವ ಲಂಡನ್ ಆಂಬುಲೆನ್ಸ್ ಸೇವೆ, ತಾನು ಐವರು ಗಾಯಾಳುಗಳಿಗೆ ಚಿಕಿತ್ಸೆ ನೀಡಿರೋದಾಗಿ ಹೇಳಿದೆ. ಎಲ್ಲರನ್ನೂ ಆಸ್ಪತ್ರೆಗೆ ರವಾನಿಸಲಾಗಿದ್ದು, ಗಾಯಾಳಗಳ ಆರೋಗ್ಯ ಸ್ಥಿತಿ ಕುರಿತಾಗಿ ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ಮಾಹಿತಿ ನೀಡಿದೆ. ಈ ಘಟನೆಯು ಮೇಲ್ನೋಟಕ್ಕೆ ಭಯೋತ್ಪಾದಕ ದಾಳಿಯಂತೆ ಕಂಡು ಬರುತ್ತಿಲ್ಲ ಎಂದು ಗ್ರೇಟರ್ ಲಂಡನ್ನ ಹೆಚ್ಚುವರಿ ಪೊಲೀಸ್ ಆಯುಕ್ತ ಅಡೆ ಅಡೆಲೆಕನ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.