ಬೆಂಗಳೂರು: ಯುಗಾದಿ ಹಬ್ಬ ಮತ್ತು ಹೊಸ ತೊಡಕು ಪ್ರಯುಕ್ತ ನಂದಿನಿ ಬಡಾವಣೆಯಲ್ಲಿ ಭಾನುವಾರ ಆಯೋಜಿಸಿದ್ದ ರಾಗಿ ಮುದ್ದೆ, ನಾಟಿ ಕೋಳಿ ಸಾರು ಊಟ ಮಾಡುವ ಸ್ಪರ್ಧೆಯಲ್ಲಿ 12 ಮುದ್ದೆ ಅದರ ಮೇಲೆ ಅರ್ಧ ಮುದ್ದೆ ಊಟ ಮಾಡಿದ ಸ್ಥಳೀಯ ನಿವಾಸಿಗಳಾದ 55 ವರ್ಷದ ವೆಂಕಟರಾಮ ಪುರುಷರ ವಿಭಾಗದಲ್ಲಿ ಮತ್ತು ಏಳೂವರೆ ಮುದ್ದೆ ಊಟ ಮಾಡುವ ಮೂಲಕ 35 ವರ್ಷದ ಗೀತಾ ಮಹಿಳೆಯರ ವಿಭಾಗದಲ್ಲಿ ಮೊದಲ ಸ್ಥಾನ ಪಡೆದುಕೊಂಡರು.
ಕೆಂಪೇಗೌಡ ಚಾರಿಟಬಲ್ ಟ್ರಸ್ಟ್ ವತಿಯಿಂದ ನಂದಿನಿ ಬಡಾವಣೆಯ ಜೈ ಮಾರುತಿ ನಗರದಲ್ಲಿ ಹಮ್ಮಿಕೊಂಡಿದ್ದ 2ನೇ ವರ್ಷದ ಸ್ಪರ್ಧೆಯಲ್ಲಿ ಬೆಂಗಳೂರು ನಗರ, ಕುಣಿಗಲ್, ದೊಡ್ಡಬಳ್ಳಾಪುರ, ಮಂಡ್ಯ, ಮಳವಳ್ಳಿ, ರಾಮನಗರ, ಚಿಕ್ಕಬಳ್ಳಾಪುರ, ತುಮಕೂರು, ನಾಗಮಂಗಲ ಸೇರಿದಂತೆ ವಿವಿಧೆಡೆಯಿಂದ ಸ್ಪರ್ಧಿಗಳು ಪಾಲ್ಗೊಂಡಿದ್ದರು.
ಊಟ ಮುಗಿಸಲು 30 ನಿಮಿಷ ಸಮಯ ನಿಗದಿಗೊಳಿಸಲಾಗಿತ್ತು. ಸ್ಪರ್ಧೆ ವೀಕ್ಷಿಧಿಸಲು ಸುಮಾರು 500ಕ್ಕೂ ಹೆಚ್ಚು ಮಂದಿ ಸ್ಥಳದಲ್ಲಿ ಜಮಾಯಿಸಿದ್ದರು. ಪ್ರತಿ ಒಂದು ಮುದ್ದೆ ಊಟ ಮಾಡಿದ ನಂತರ ವೀಕ್ಷಕರು ಸಿಳ್ಳೆ-ಚಪ್ಪಾಳೆ ಹೊಡೆದು ಸ್ಪರ್ಧಿಗಳನ್ನು ಹುರಿದುಂಬಿಸುತ್ತಿದ್ದರು.